ಬಳ್ಳಾರಿ : ಗಣಿನಾಡು ಜಿಲ್ಲೆಯ ಹಂಪಿ ಉತ್ಸವದಲ್ಲಿ ಡಿಜಿಟೂರ್ ಸಂಸ್ಥೆಯ ಐತಿಹಾಸಿಕ ಸ್ಮಾರಕಗಳ ಮಾಹಿತಿಯನ್ನು virtual reality augmented reality ಎಂಬ ಹೊಸ ತಂತ್ರಜ್ಞಾನ ಬಳಸಿಕೊಂಡು ಪ್ರವಾಸಿಗರಿಗೆ ಧ್ವನಿ ಮತ್ತು ದೃಶ್ಯ ಮಾಧ್ಯಮಗಳ ಮೂಲಕ ಮೊಬೈಲ್ ನಲ್ಲಿ ಮಾಹಿತಿ ಕೊಡುವ ತಂತ್ರಜ್ಞಾನವನ್ನು ಉಪಮುಖ್ಯಮಂತ್ರಿ ಲಕ್ಷಣ ಸವದಿ ಹಾಗೂ ಸಿ. ಟಿ. ರವಿ ಬಿಡುಗಡೆ ಮಾಡಿದರು.
ಈಟಿವಿ ಭಾರತನೊಂದಿಗೆ ಮಾತನಾಡಿದ ಡಿಜಿಟೂರ್ ಸಂಸ್ಥಾಪಕ ಆನಂದ್ ಬಾಬು, ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ಸ್ಟಾರ್ಟಪ್ ನವೋದ್ಯಮವಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಐಡಿಯ ಟು ಪಿಒಸಿ ಯೋಜನೆಯ ಅಡಿಯಲ್ಲಿ ಡಿಜಿಟೂರ್ ಸಂಸ್ಥೆಯ ಈ ಅನ್ವೇಷಣೆಯನ್ನು ಕೈಗೊಂಡು ಡಿಜಿಟೊರ್ ( Digitour) ಎಂಬ ಮೊಬೈಲ್ ಆ್ಯಪ್ ಅಭಿವೃದ್ದಿ ಪಡಿಸಲಾಗಿದೆ ಎಂದು ತಿಳಿಸಿದರು.
ಪ್ರವಾಸಿಗರು Google Play store ಮತ್ತು App Store ಗಳಲ್ಲಿ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು. ಮಾಹಿತಿಯನ್ನು ಹಲವಾರು ಭಾಷೆಗಳಲ್ಲಿಯೂ ಕೂಡಾ ಪಡೆಯಬಹುದು ಎಂದರು. ಪ್ರಾಯೋಗಿಕವಾಗಿ ಎರಡು ತಿಂಗಳುಗಳ ಕಾಲ ಪ್ರವಾಸಿಗರಿಗೆ ಈ ತಂತ್ರಜ್ಞಾನವನ್ನು ಉಚಿತವಾಗಿ ನೀಡಲಾಗುತ್ತದೆ. ಈಗಾಗಲೇ ಕರ್ನಾಟಕದ ಹಲವು ಸ್ಮಾರಕಗಳ ಬಗ್ಗೆ ಮಾಹಿತಿಯನ್ನು ದಾಖಲಿಸಲಾಗಿದೆ. ಈ ಆ್ಯಪ್‌ನಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ಹಾಗೂ ಪ್ರವಾಸಿಗರಿಗೆ ಅನುಕೂಲಕರವಾಗುತ್ತದೆ ಎಂದು ತಿಳಿಸಿದರು.
ಶಾಸಕ ಆನಂದ್ ಸಿಂಗ್, ಜಿಲ್ಲಾಧಿಕಾರಿ ಎಸ್.ಎಸ್ ನಕುಲ್, ತಾ.ಪಂ. ಅಧ್ಯಕ್ಷ ಪಾಲಪ್ಪ, ಅಂಚೆ ಇಲಾಖೆ ವೀಣಾ ಶ್ರೀವಾತ್ಸವ, ಅಪರ ಜಿಲ್ಲಾಧಿಕಾರಿ ಮಂಜುನಾಥ್ ಹಾಜರಿದ್ದರು.