ಬಳ್ಳಾರಿ: 2023ರ ವಿಧಾನಸಭಾ ಚುನಾವಣೆಯಲ್ಲಿ ಸಚಿವ ಶ್ರೀರಾಮುಲು ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ ಎಂಬ ಮಾತುಗಳು ಕೇಳಿಬಂದಿವೆ. ಇದಕ್ಕೆ ಪೂರಕವೆಂಬಂತೆ ಮುಸ್ಲಿಂ ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟಿರುವ ಅವರು, ಮಸೀದಿಗಳಿಗೆ ಡೆವಲಪ್ಮೆಂಟ್ ಹೆಸರಲ್ಲಿ ಭರ್ಜರಿ ದೇಣಿಗೆ ನೀಡುತ್ತಿದ್ದಾರೆ.
ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತದಾರರು ನಿರ್ಣಾಯಕರಾಗಿದ್ದಾರೆ. ಕೌಲಬಜಾರ ವ್ಯಾಪ್ತಿಯಲ್ಲಿ ಬರುವ 9 ವಾರ್ಡ್‍ಗಳಲ್ಲಿ ಅತಿ ಹೆಚ್ಚು ಮುಸ್ಲಿಂ ಮತದಾರರಿದ್ದಾರೆ. ಹೀಗಾಗಿ, ಒಂದೊಂದು ಮಸೀದಿಗೆ 20 ಲಕ್ಷ ರೂ ದೇಣಿಗೆ ನೀಡುವ ಮೂಲಕ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
2018ರ ಚುನಾವಣೆ ವೇಳೆ ಬದಲಾದ ರಾಜಕೀಯ ಸನ್ನಿವೇಶದಿಂದ ಶ್ರೀರಾಮುಲು ಮೊದಲಿದ್ದ ಬಳ್ಳಾರಿ ಗ್ರಾಮಾಂತರ ಕ್ಷೇತ್ರ ಬಿಟ್ಟು ಮೊಳಕಾಲ್ಮೂರಿಗೆ ತೆರಳಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡನೇ ಕ್ಷೇತ್ರವಾಗಿ ಬಾದಾಮಿಯನ್ನು ಆಯ್ಕೆ ಮಾಡಿಕೊಂಡಾಗ ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಬಾದಾಮಿಯಲ್ಲಿ ಸ್ಪರ್ಧೆ ಮಾಡಿದ ಶ್ರೀರಾಮುಲು, ಮೊಳಕಾಲ್ಮೂರಿನಲ್ಲಿ ಗೆದ್ದು, ಬಾದಾಮಿಯಲ್ಲಿ ಕೆಲ ಮತಗಳ ಅಂತರದಲ್ಲಿ ಸೋಲು ಅನುಭವಿಸಿದರು.
ಆದರೆ, ಈ ಬಾರಿ ಲೆಕ್ಕಾಚಾರ ಬದಲಾಗಿದೆ. ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಅನ್ನೋದೇ ದೊಡ್ಡ ಪ್ರಶ್ನೆ. 2018 ರಲ್ಲಿದ್ದಂತೆ ಹೈಕಮಾಂಡ್ ಮಟ್ಟದಲ್ಲಿ ಶ್ರೀರಾಮುಲು ವರ್ಚಸ್ಸು ಹೇಳಿಕೊಳ್ಳುವಷ್ಟಿಲ್ಲ ಎನ್ನಲಾಗ್ತಿದೆ. ಅಲ್ಲದೇ, ಮೊಳಕಾಲ್ಮೂರಿನಲ್ಲಿ ಈ ಬಾರಿ ಗೆಲ್ಲುವುದು ಕೂಡಾ ಅಷ್ಟು ಸುಲಭವಲ್ಲ. ಹೀಗಾಗಿ ಮತ್ತೊಮ್ಮೆ ತವರು ಕ್ಷೇತ್ರದತ್ತ ಮುಖ ಮಾಡಿರೋ ಶ್ರೀರಾಮುಲು ವಿನೂತನ ತಂತ್ರಗಾರಿಗೆ ಹೆಣೆಯುತ್ತಿದ್ದಾರೆ. ಬಳ್ಳಾರಿ ಗ್ರಾಮಾಂತರ ಪ್ರದೇಶದ ಕೌಲ್ ಬಜಾರ್ ವ್ಯಾಪ್ತಿಯ 9 ನೇ ವಾರ್ಡ್ನಲ್ಲಿ ಅತಿಹೆಚ್ಚು ಮುಸ್ಲಿಂ ಮತದಾರರಿದ್ದಾರೆ. ಅವರ ಓಲೈಕೆ ಮಾಡೋ ನಿಟ್ಟಿನಲ್ಲಿ ಮಸೀದಿ ಡೆವಲಪ್ಮೆಂಟ್ ಮಾಡೋದಕ್ಕೆ ಹಣ ನೀಡುತ್ತಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀರಾಮುಲು, ದೇಣಿಗೆ ನಾನು ಕೊಟ್ಟಿಲ್ಲ. ದಾನಿಗಳು ನನ್ನ ಮೂಲಕ ಕೊಡಿಸಿದ್ದಾರೆಂದು ಹೇಳುತ್ತಿದ್ದಾರೆ. ಧರ್ಮದ ಕೆಲಸದಲ್ಲಿ ಈ ಕೈಗೆ ಕೊಟ್ಟಿದ್ದು ಮತ್ತೊಂದು ಕೈಗೆ ಕಾಣಬಾರದು. ನಾನು ಒಂದು ರೂಪಾಯಿಯನ್ನು ಕೊಟ್ಟಿಲ್ಲ. ಬೇರೆಯವರ ಕೈಯಿಂದ ಕೊಡಿಸಿದ್ದೇನೆ. ನನ್ನ ಮೂಲಕ ದೇಣಿಗೆ ದೇವಸ್ಥಾನ, ಮಸೀದಿಗೆ ಮುಟ್ಟುತ್ತದೆ ಅಂದರೆ ತಪ್ಪೇನು? ಎಂದು ಹಣ ಹಂಚಿಕೆ ಸಮರ್ಥನೆ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಸಿಎಎ, ಹಿಜಾಬ್, ಹಲಾಲ್ ಕಟ್ ಸೇರಿದಂತೆ ಇತರೆ ಗಲಾಟೆ ನಡೆದಾಗ ಮುಸ್ಲಿಂ ಪರ ಮಾತನಾಡದ ಶ್ರೀರಾಮುಲು ಏಕಾಏಕಿ ಮುಸ್ಲಿಮರ ಮೇಲೆ ಏಕೆ ಹೆಚ್ಚು ಪ್ರೀತಿ ಬಂದಿದೆ?. ಬಳ್ಳಾರಿ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಮುಸ್ಲಿಂ ಮತದಾರರು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಹಾಗಾಗಿ, ಪ್ರಾಬಲ್ಯವಿರುವ ನಗರಪ್ರದೇಶದಲ್ಲಿ ಸಚಿವ ಶ್ರೀರಾಮುಲು ಮುಸ್ಲಿಮರನ್ನು ಓಲೈಕೆ ಮಾಡಲು ಮಸೀದಿಗಳಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ. ಆದ್ರೆ ಬಳ್ಳಾರಿ ಮುಸ್ಲಿಂ ಮತದಾರರ ಬುದ್ಧಿವಂತರು. ಹೀಗಾಗಿ, ಯಾರು ಕೂಡ ಶ್ರೀರಾಮುಲು ದಾಳಕ್ಕೆ ಬೀಳಲ್ಲ ಎಂದು ಕಾಂಗ್ರೆಸ್ನ ಜಿಲ್ಲಾಧ್ಯಕ್ಷ ರಫೀಕ್ ಹೇಳಿದ್ದಾರೆ.
ಇದನ್ನೂ ಓದಿ: ಬಿಎಸ್‍ವೈ, ಅಮಿತ್ ಶಾ, ಬಿಜೆಪಿಯ ಎಂಎಲ್ಎಗಳು ಏಕೆ ಜೈಲಿಗೆ ಹೋಗಿದ್ರು?: ಡಿಕೆಶಿ