ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರ ಮಾಲೀಕತ್ವದ ಒಬಳಾಪುರಂ ಮೈನಿಂಗ್ ಕಂಪನಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದ ಹಿಂದ್ ಟ್ರೇಡರ್ಸ್ ಮೈನಿಂಗ್ ಕಂಪನಿ ಜೊತೆಯೇ ಸಚಿವ ಕೆ.ಎಸ್.ಈಶ್ವರಪ್ಪನವರು ಸಂಬಂಧಿಕರೂ ಕೂಡ ಒಡಂಬಡಿಕೆ ಮಾಡಿಕೊಂಡಿದ್ದಾರೆ ಎಂದು ಗಣಿ ಅಕ್ರಮದ ಹೋರಾಟಗಾರ ಟಪಾಲ್ ಗಣೇಶ ದೂರಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಕಳೆದ ಮೂರ್ನಾಲ್ಕು ದಿನಗಳಿಂದಲೂ ಕೂಡ ಗಡಿಧ್ವಂಸ ಹಾಗೂ ಗಡಿ ಒತ್ತುವರಿ ಪ್ರಕರಣದ ಇತ್ಯರ್ಥಕ್ಕಾಗಿ ಸರ್ವೇ ಆಫ್ ಇಂಡಿಯಾದ ಡೈರೆಕ್ಟರ್ಗಳು ಆಗಮಿಸಿದ್ದರು. ಈ ವೇಳೆ ಸಚಿವ ಕೆ.ಎಸ್.ಈಶ್ವರಪ್ಪನವರ ಅಳಿಯ ಸೋಮಶೇಖರ್ ಅವರೇ ಹಿಂದ್ ಟ್ರೇಡರ್ಸ್ ಮೈನಿಂಗ್ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ಎರಡು ವರ್ಷಗಳ ಹಿಂದೆಯೇ ಈ ಎಂಒಯು ಆಗಿದೆ ಎಂದು ಬೆಂಗಳೂರಿನ ಮೈನ್ಸ್ ಆ್ಯಂಡ್ ಜ್ಯೂಯಾಲಾಜಿ (ಡಿಎಂಜಿ) ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ನಿವೃತ್ತ ನ್ಯಾ. ಸಂತೋಷ ಹೆಗ್ಡೆಯವರು ಲೋಕಾಯುಕ್ತರಾಗಿದ್ದಾಗ ಹಿಂದ್ ಟ್ರೇಡರ್ಸ್ ಮೈನಿಂಗ್ ಕಂಪನಿಯ ಲೈಸೆನ್ಸ್ ರದ್ದು ಮಾಡಿ ಎಂದು ಶಿಫಾರಸ್ಸು ಮಾಡಿದ್ದರು. ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರ ಒಬಳಾಪುರಂ ಮೈನಿಂಗ್ ಕಂಪನಿಯೊಂದಿಗೆ ಹಿಂದ್ ಟ್ರೇಡರ್ಸ್ ಮೈನಿಂಗ್ ಕಂಪನಿ ಒಳಒಪ್ಪಂದ ಮಾಡಿಕೊಂಡು ಗಣಿ ಅಕ್ರಮದ ರೂವಾರಿಗಳಾಗಿದ್ದರು. ಹೀಗಾಗಿ, ಗಣಿ ಅಕ್ರಮದ ಆರೋಪ ಹೊತ್ತಿರುವ ಈ ಹಿಂದ್ ಟ್ರೇಡರ್ಸ್ ಮೈನಿಂಗ್ ಕಂಪನಿಯೊಂದಿಗೆ ಹಾಲಿ ಸಚಿವ ಈಶ್ವರಪ್ಪನವರ ಅಳಿಯನೆಂದು ಹೇಳಿಕೊಳ್ಳುವ ಬಳ್ಳಾರಿಯ ಸೋಮಶೇಖರ ಎಂಬಾತ ಒಡಂಬಡಿಕೆ ಮಾಡಿಕೊಂಡಿದ್ದಾರೆ.
ಹಾಲಿ ಸಚಿವ ಈಶ್ವರಪ್ಪನವರು ಗಮನಕ್ಕೆ ಬಾರದೇ ಈ ಒಡಂಬಡಿಕೆ ಆಗೋದಿಲ್ಲ. ಈ ಬಗ್ಗೆ ಈಶ್ವರಪ್ಪನವರಿಗೆ ಮಾಹಿತಿಯಿದೆ ಎಂದು ನಾನು ತಿಳಿದಿರುವೆ. ಈಶ್ವರಪ್ಪನವರೇ ನಿಮಗೇನಾದ್ರೂ ಅಂತಾರಾಜ್ಯದ ಗಡಿ ಬಗ್ಗೆ ಕಿಂಚಿತ್ತಾದರೂ ಕಾಳಜಿಯಿದ್ದರೆ ಕೂಡಲೇ ಹಿಂದ್ ಟ್ರೇಡರ್ಸ್ ಮೈನಿಂಗ್ ಕಂಪನಿಯ ಜೊತೆಗಿನ ಒಡಂಬಡಿಕೆಯನ್ನ ವಾಪಾಸ್ ಪಡೆಯುವುದರ ಜೊತೆಗೆ ಗಡಿ ಗುರುತು ಫಿಕ್ಸ್ ಮಾಡಿಕೊಡಲು ಅನುವು ಮಾಡಿಕೊಡಿ. ಇಲ್ಲವಾದರೆ ನೀವು ಕೂಡ ಗಣಿ ಅಕ್ರಮದಲ್ಲಿ ಭಾಗಿಯಾಗಿದ್ದೀರಿ ಎಂಬ ಸಂಶಯವು ನನಗೆ ಮೂಡಿದೆ ಎಂದರು.