ಹೊಸಪೇಟೆ: ತುಂಗಭದ್ರಾ ಜಲಾಶಯ ಕರ್ನಾಟಕ ಸೇರಿದಂತೆ ಆಂಧ್ರ ಪ್ರದೇಶದ ರೈತರ ಜೀವನಾಡಿಯಾಗಿದೆ. ಜಲಾಶಯಕ್ಕೆ ಭದ್ರತೆ ಹೆಚ್ಚಿಸಲು ಆಡಳಿತ ಮಂಡಳಿ ಕ್ರಮ ಕೈಗೊಂಡಿದ್ದು, ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಗೆ (ಕೆಎಸ್ಐಎಸ್ಎಫ್) ಭದ್ರತೆ ಜವಾಬ್ದಾರಿ ವಹಿಸಲಾಗಿದೆ.
ಈ ಮೊದಲು ತುಂಗಭದ್ರಾ ಎಡದಂಡೆ, ಬಲದಂಡೆ ಸೇರಿದಂತೆ ಹಲವು ಕಡೆ ಡಿಆರ್, ಸಿವಿಲ್, ಖಾಸಗಿ ಭದ್ರತಾ ಸಿಬ್ಬಂದಿಗೆ ಭದ್ರತೆಯ ಜವಾಬ್ದಾರಿ ನೀಡಲಾಗಿತ್ತು. ಆದರೆ ಈಗ ಕೆಎಸ್ಐಎಸ್ಎಫ್ ಭದ್ರತೆ ನೀಡಲಿದೆ. ಜಲಾಶಯಕ್ಕೆ ಕೆಎಸ್ಐಎಸ್ಎಫ್ ಭದ್ರತೆ ಒದಗಿಸುವಂತೆ ತುಂಗಭದ್ರಾ ಆಡಳಿತ ಮಂಡಳಿ ಈ ಹಿಂದೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಹೀಗಾಗಿ ಸರ್ಕಾರ ಮೊದಲ ಹಂತದಲ್ಲಿ 23 ಭದ್ರತಾ ಪೊಲೀಸರನ್ನು ನಿಯೋಜಿಸಿದೆ. ಎರಡನೇ ಹಂತದಲ್ಲಿ 20 ಸಿಬ್ಬಂದಿ ನಿಯೋಜನೆಗೊಳ್ಳಲಿದ್ದಾರೆ.
ಭದ್ರತೆಗೆ ಒತ್ತು: ಕೆಎಸ್ಐಎಸ್ಎಫ್ ಭದ್ರತಾ ಸಿಬ್ಬಂದಿ ಕೈಯಲ್ಲಿ ಬಂದೂಕು ಇರಲಿದೆ. ಇದರಿಂದ ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದು ತಪ್ಪಲಿದೆ. ಈ ಮುಂಚೆ ಭದ್ರತಾ ಸಿಬ್ಬಂದಿ ಕೈಯಲ್ಲಿ ಲಾಠಿ ಮಾತ್ರ ಇರುತ್ತಿತ್ತು. ಈ ಸಂದರ್ಭದಲ್ಲಿ ಕಿಡಿಗೇಡಿಗಳು ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಉದಾಹರಣೆಗಳಿವೆ. ಇದೀಗ ಕೆಎಸ್ಐಎಸ್ಎಫ್ ಭದ್ರತೆ ಪಡೆಗೆ ಸಂಪೂರ್ಣ ಅಧಿಕಾರ ನೀಡಿದ್ದು, ಹಲ್ಲೆ ಮಾಡಿದವರ ವಿರುದ್ಧ ಸ್ಥಳದಲ್ಲಿಯೇ ಕ್ರಮ ಕೈಗೊಳ್ಳಬಹುದುದಾಗಿದೆ.
ಡ್ಯಾಂ ಪ್ರವೇಶಕ್ಕೆ ಅನುಮತಿ ಕಡ್ಡಾಯ: ಈ ಮುಂಚೆ ಖಾಸಗಿ ವಾಹನಗಳು ಡ್ಯಾಂ ಪ್ರವೇಶವನ್ನು ಸುಲಭವಾಗಿ ಪಡೆಯಬಹುದಿತ್ತು. ಸಿಬ್ಬಂದಿ ಮೇಲೆ ರಾಜಕೀಯ ಸೇರಿದಂತೆ ಇನ್ನಿತರ ಗಣ್ಯರ ಒತ್ತಡ ಇರುತ್ತಿತ್ತು. ಆದರೆ, ಈಗ ಡ್ಯಾಂ ಪ್ರವೇಶವನ್ನು ಪಡೆಯಬೇಕಾದರೆ ಕೆಎಸ್ಐಎಸ್ಎಫ್ ಮುಖ್ಯಸ್ಥರ ಅನುಮತಿ ಕಡ್ಡಾಯಗೊಳಿಸಲಾಗಿದೆ.
ಈ ಕುರಿತು ಈಟಿವಿ ಭಾರದೊಂದಿಗೆ ಮಾತನಾಡಿದ ತುಂಗಭದ್ರಾ ಜಲಾಶಯದ ಆಡಳಿತ ಮಂಡಳಿ ಕಾರ್ಯದರ್ಶಿ ಜಿ.ನಾಗಮೋಹನ, ಹೆಚ್ಚಿನ ಭದ್ರತೆ ದೃಷ್ಟಿಯಿಂದ ಕೆಎಸ್ಐಎಸ್ಎಫ್ ಭದ್ರತೆ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರ್ಕಾರ ಏಪ್ರಿಲ್ ತಿಂಗಳಿನಿಂದ ಕೆಎಸ್ಐಎಸ್ಎಫ್ ಸಿಬ್ಬಂದಿ ನೀಡಿದೆ. ಈಗ ಜನಪ್ರತಿನಿಧಿಗಳ ಒತ್ತಡಕ್ಕೆ ವಾಹನಗಳನ್ನು ಬಿಡುವಂತಿಲ್ಲ. ಕೆಎಸ್ಐಎಸ್ಎಫ್ ಮುಖ್ಯಸ್ಥರ ಅನುಮತಿ ಕಡ್ಡಾಯವಾಗಿ ಬೇಕು. ಕಾಲುವೆ ದಂಡೆಯ ಮೇಲೆ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು: ಇಲಾಖೆಗಳು ವಿಲೀನ, ಹುದ್ದೆ ಕಡಿತಕ್ಕೆ ಮುಂದಾದ ರಾಜ್ಯ ಸರ್ಕಾರ!