ಹೊಸಪೇಟೆ : ಸಾಹಿತಿಗಳು ಮತ್ತು ಕವಿಗಳು ಸಾಹಿತ್ಯದ ಆಳಕ್ಕಿಳಿದು ಅನುವಾದ ಮಾಡಬೇಕು, ಅದು ಜನಸಾಮಾನ್ಯರಿಗೆ ಅರ್ಥವಾಗುವಂತಿರಬೇಕು ಎಂದು 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಸಂಭಾಂಗಣದಲ್ಲಿ ನಡೆದ ಅಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಭಾಷಾಂತರ ಕೇಂದ್ರ ಹಾಗೂ ಕುವೇಂಪು ಭಾಷಾ ಭಾರತಿ ಪ್ರಾಧಿಕಾರದ ಯುವ ಭಾಷಾಂತರ ತರಬೇತಿ ಕಮ್ಮಟದಲ್ಲಿ ಮಾತನಾಡಿದ ಅವರು, ಖಾಸಗಿಯಾಗಿ ಮತ್ತು ವೈಯಕ್ತಿಕವಾಗಿ ಈ ರೀತಿಯ ಅನುಸೃಷ್ಟಿಯಲ್ಲಿ ನಿಷ್ಠೆ ಬಹಳ ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪರ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತು ನಮ್ಮದಾಗಿಸಿಕೊಳ್ಳುವಲ್ಲಿ ಅನುವಾದಕರ ಸೇವೆ ಬಹಳ ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಭಾಷಾಂತರ ಕ್ರಿಯೆಯಲ್ಲಿ ಶ್ರದ್ಧೆ, ಧ್ಯಾನ, ನಿಷ್ಠೆಗಳು ಕಡಿಮೆಯಾಗುತ್ತಿವೆ. ಪಾಂಡಿತ್ಯ ನಿಧಾನವಾಗಿ ಕ್ಷಯಿಸುತ್ತಿದೆ ಎಂದು ಆತಂಕವನ್ನು ವ್ಯಕ್ತಪಡಿಸದರು.
ಕವಿಗಳು ಮತ್ತು ಸಾಹಿತಿಗಳು ಎಲ್ಲ ಸಮಾಜದ ಘಟನೆಗಳನ್ನು ಅರ್ಥ ಮಾಡಿಕೊಂಡು ಸಾಹಿತ್ಯದ ಆಳಕ್ಕೆ ಇಳಿದು ಸಮಾಜಕ್ಕೆ ಮತ್ತು ಜನ ಸಾಮಾನ್ಯರಿಗೆ ಅರ್ಥವಾಗುವಂತೆ ಅನುವಾದ ಮಾಡಬೇಕು ಎಂದರು.