ಬಳ್ಳಾರಿ: ₹12 ಸಾವಿರ ಮಾಸಿಕ ಗೌರವಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜುಲೈ 10ರಿಂದ ಸೇವೆ ಸ್ಥಗಿತಗೊಳಿಸಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರವಧನ ಖಾತರಿಪಡಿಸುವುದರ ಜೊತೆಗೆ ಆರೋಗ್ಯ ರಕ್ಷಣಾ ಸಾಮಗ್ರಿಗಳನ್ನು ನೀಡಬೇಕು. ಬೇಡಿಕೆಗಳನ್ನು ಈಡೇರಿಸದಿದ್ದರೆ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸಿ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದರು.
ನಿರಂತರವಾಗಿ ಮೂರು ತಿಂಗಳಿಂದ ಆಶಾ ಕಾರ್ಯಕರ್ತೆಯರು ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ. ಅವರಿಗೆ ಈ ಸನ್ಮಾನ, ಹೂವಿನ ಸುರಿಮಳೆ ಅಗತ್ಯವಿಲ್ಲ. ಅದರಿಂದ ಹೊಟ್ಟೆ ತುಂಬುವುದಿಲ್ಲ. ನಮ್ಮ ಮೇಲೆ ಗೌರವ ಇದ್ದರೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.
42 ಸಾವಿರ ಆಶಾ ಕಾರ್ಯಕರ್ತೆಯರಲ್ಲಿ 18-19 ಸಾವಿರ ಆಶಾ ಕಾರ್ಯಕರ್ತೆಯರಿಗೆ ₹3 ಸಾವಿರ ಸಹಾಯಧನ ಇನ್ನೂ ಮುಟ್ಟಿಲ್ಲ. ಕೂಡ್ಲಿಗಿ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಸಿರುಗುಪ್ಪ, ಹಡಗಲಿ ತಾಲೂಕಿನ ಶೇ. 50ರಷ್ಟು ಪ್ರೋತ್ಸಾಹಧನ ನೀಡಿದ್ದಾರೆ. ಉಳಿದವರಿಗೆ ಹಣ ತಲುಪಿಲ್ಲ ಎಂದು ದೂರಿದರು.
ಬಂಡಿಹಟ್ಟಿಯ ಆಶಾ ಕಾರ್ಯಕರ್ತೆ ಕವಿತಾ ಎಂಬುವರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಕುರುವಳ್ಳಿ ನೀಡಿದ ₹ 3 ಸಾವಿರ ಚೆಕ್ ಬೌನ್ಸ್ ಆಗಿದೆ. ಈ ರೀತಿ ಜಿಲ್ಲೆಯ ನಾಲ್ವರಿಗೆ ಆಗಿದೆ ಎಂದರು.
ಬೇಡಿಕೆಗಳು
- ಪ್ರೋತ್ಸಾಹಧನ ಮತ್ತು ಗೌರವಧನ ಎರಡನ್ನೂ ಒಟ್ಟಿಗೆ ಸೇರಿಸಿ 12 ಸಾವಿರ ಗೌರವಧನ ನೀಡಿ
- ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ತಪಾಸಣೆ ಮಾಡಬೇಕು
- ಕೊರೊನಾ ವೈರಸ್ ಬಂದರೆ ಉಚಿತ ಚಿಕಿತ್ಸೆ ಜೊತೆಗೆ ಸಂಪೂರ್ಣ ಗೌರವಧನ ನೀಡಬೇಕು
- ಮಾಸ್ಕ್, ಸ್ಯಾನಿಟೈಸರ್, ಫೇಸ್ ಶೀಲ್ಡ್ ಸಮಪರ್ಕವಾಗಿ ನೀಡಬೇಕು