ಬಳ್ಳಾರಿ: ಪ್ರಪಂಚದಲ್ಲಿಯೇ ಅತಿ ಹೆಚ್ಚು ಉಕ್ಕು ಉತ್ಪಾದಿಸಿ ದಾಖಲೆ ಮಾಡಿರುವ ಜಿಂದಾಲ್ ಮುಡಿಗೆ ಹಿರಿಮೆಯ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಹೊಸ ತಂತ್ರಜ್ಞಾನದ ಮೂಲಕ ಉಕ್ಕಿನ ತಯಾರಿಕೆಯ ಸ್ಲ್ಯಾಗ್ ಅನ್ನು ಕಡಿಮೆ ವೆಚ್ಚದಲ್ಲಿ ಪರಿಸರ ಸ್ನೇಹಿ ಮರಳಾಗಿ ಪರಿವರ್ತಿಸುವ ಪ್ರಕ್ರಿಯೆ ಅಭಿವೃದ್ಧಿಪಡಿಸಲಾಗಿದೆ.
ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಪ್ರಪಂಚದ ಮೊದಲ ಸ್ಟೀಲ್-ಸ್ಲ್ಯಾಗ್ ಮರಳು ಪ್ಲಾಂಟ್ ಅನ್ನು ಜೆಎಸ್ಡಬ್ಲ್ಯು ಸ್ಟೀಲ್ ಸಂಸ್ಥೆ ಅಭಿವೃದ್ಧಿ ಪಡಿಸಿದ್ದು, ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಉದ್ಘಾಟಿಸಿದರು. ಜೆಎಸ್ಡಬ್ಲ್ಯು ಸ್ಟೀಲ್ ವಿಜಯನಗರ ವರ್ಕ್ಸ್ನ ಸಂಶೋಧನೆ ಮತ್ತು ಅಭಿವೃದ್ಧಿ ತಂಡವು ಉಕ್ಕಿನ ತಯಾರಿಕೆಯ ಸ್ಲ್ಯಾಗ್ ಅನ್ನು ಮರಳಾಗಿ ಪರಿವರ್ತಿಸುವ ಪ್ರಕ್ರಿಯೆ ಅಭಿವೃದ್ಧಿಪಡಿಸಿದೆ. ಇದು ಕಡಿಮೆ - ವೆಚ್ಚದ ಪರಿಸರ ಸ್ನೇಹಿ ಮರಳನ್ನು ಒದಗಿಸುತ್ತದೆ.
ಈ ಕುರಿತು ಮಾತನಾಡಿದ ಡಿಸಿ ಪವನ್ ಕುಮಾರ್ ಮಾಲಪಾಟಿ, ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿ ಜೆಎಸ್ಡಬ್ಲ್ಯು ಸಂಸ್ಥೆಯ ಪ್ರಯತ್ನ ಶ್ಲಾಘಿಸಿದರು. ಕರ್ನಾಟಕದಲ್ಲಿ ಮರಳಿನ ಕೊರತೆ ಇದ್ದು, ಪರಿಸರ ಕಾಳಜಿಯ ಜೊತೆ ಈ ಹೊಸ ತಂತ್ರಜ್ಞಾನವು ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ಒತ್ತಿ ಹೇಳಿದರು. ಜೊತೆಗೆ ಜೆಎಸ್ಬ್ಲ್ಯೂ ಸ್ಟೀಲ್ ವಿಜಯನಗರ ವರ್ಕ್ಸ್ ದೇಶದ ಸ್ವಚ್ಛ ಸ್ಥಾವರಗಳಲ್ಲಿ ಒಂದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವರ್ಕ್ಸ್ ಅಧ್ಯಕ್ಷ ಪಿ.ಕೆ.ಮುರುಗನ್ ಮಾಡನಾಡಿ, ಸ್ಲ್ಯಾಗ್ ಬಳಸುವುದರಿಂದ ಗಣಿಗಾರಿಕೆ/ಪುಡಿಮಾಡುವಿಕೆ, ಸಂಸ್ಕರಣೆ ಮತ್ತು ಸಾಗಣೆಯ ಸಮಯದಲ್ಲಿ ಉತ್ಪತ್ತಿಯಾಗುವ ಕಚ್ಚಾ ವಸ್ತು, ಶಕ್ತಿ ಮತ್ತು ಮಾಲಿನ್ಯಕಾರಕ ಹೊರಸೂಸುವಿಕೆಯ ಅಗತ್ಯವನ್ನು ಕಡಿಮೆ ಮಾಡುತ್ತದೆ ಎಂದರು. ಈ ವೇಳೆ ಪಾಲಿಕೆ ಆಯುಕ್ತ ಪ್ರೀತಿ ಗೆಲ್ಲೋಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈಡುಲು ಅಡಾವತ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಲ್.ಆರ್. ಸಿಂಗ್, ಅಧ್ಯಕ್ಷ ರಾಜಶೇಖರ್ ಪಟ್ಟಣಶೆಟ್ಟಿ, ಆಡಳಿತ ತಂಡ ಮತ್ತು ನೌಕರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಇಂದಿನ ತೈಲ ದರ.. ಮಂಗಳೂರಲ್ಲಿ 56 ಪೈಸೆ ಪೆಟ್ರೋಲ್ ಇಳಿಕೆ