ಬಳ್ಳಾರಿ: ಆ ಸೇತುವೆ ಎರಡು ಜಿಲ್ಲೆಗಳ ಪ್ರಮುಖ ಸಂಪರ್ಕಕೊಂಡಿ. ಕಳೆದ ಐದಾರು ದಶಕ ಇತಿಹಾಸ ಇರುವ ಈ ಸೇತುವೆ ಪ್ರತಿ ಮಳೆಗಾಲದಲ್ಲಿ ಜಲಾಶಯದಿಂದ ಹೆಚ್ಚುವರಿ ನೀರು ಬಿಟ್ಟಾಗಲೆಲ್ಲ ಮುಳುಗಡೆಯಾಗುತ್ತಿದೆ. ಇದರಿಂದ ಎರಡು ಜಿಲ್ಲೆಗಳ ಸಂಪರ್ಕ ಕಡಿತವಾಗುತ್ತದೆ. ಹಲವು ದಶಕಗಳಿಂದ ಹೊಸ ಸೇತುವೆ ನಿರ್ಮಾಣವಾಗಬೇಕು ಎಂಬ ಕೂಗು ಇದೆ. ಆದರೆ, ಈಗ ಇದೇ ಸೇತುವೆ ನಿರ್ಮಾಣದ ವಿಚಾರ ಸ್ಥಳೀಯ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.
ಬಳ್ಳಾರಿ ಜಿಲ್ಲೆಯ ಕಂಪ್ಲಿ ಹಾಗೂ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿಗೆ ಸಂಪರ್ಕ ಕಲ್ಪಿಸುವ ಸೇತುವೆ ಪ್ರತಿ ವರ್ಷ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರು ನದಿಗೆ ಬಿಟ್ಟಾಗ ಸೇತುವೆ ಮುಳುಗಡೆಯಾಗುತ್ತಿದೆ. ಸೇತುವೆ ಮುಳುಗಡೆಯಿಂದ ಎರಡು ತಾಲೂಕುಗಳ ಸಂಪರ್ಕ ಕಡಿತವಾಗುತ್ತಿದೆ. ಇದರಿಂದಾಗಿ ಎರಡು ತಾಲೂಕಿನ ಜನರು ಕೂಡ 30 ಕಿ.ಮೀ ದೂರದಿಂದ ಸುತ್ತವರಿದು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೊಸ ಸೇತುವೆ ನಿರ್ಮಾಣಕ್ಕಾಗಿ ಒತ್ತಾಯಿಸಿ ಕಳೆದ ಹಲವು ದಶಕಗಳಿಂದಲೂ ಹೋರಾಟಗಳು ನಡೆದಿವೆ. ಆದರೆ, ಈಗ ಇದೇ ಸೇತುವೆ ನಿರ್ಮಾಣ ವಿಚಾರ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದೆ. ಸ್ಥಳೀಯ ಶಾಸಕ ಜೆ.ಎನ್ ಗಣೇಶ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಪ್ರತಿ ಚುನಾವಣೆ ಸಂದರ್ಭದಲ್ಲಿ ಸೇತುವೆ ನಿರ್ಮಾಣ ಮಾಡೋವುದಾಗಿ ರಾಜಕೀಯ ಪಕ್ಷಗಳು ಭರವಸೆ ಕೊಡುತ್ತಲೇ ಇವೆ. ಆದರೆ ಸೇತುವೆ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆಯಾಗಿಲ್ಲ. ಸುಳ್ಳು ಪ್ರಚಾರ ಪಡೆಯುತ್ತಿದ್ದಾರೆ ಎಂದು ಕಂಪ್ಲಿ ಕಾಂಗ್ರೆಸ್ ಶಾಸಕ ಜೆ.ಎನ್ ಗಣೇಶ್ ಆರೋಪಿಸಿದ್ದಾರೆ.
ಆದರೆ ನೂತನ ಕಂಪ್ಲಿ ಸೇತುವೆ ನಿರ್ಮಾಣದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಹೇಳೋದೇ ಬೇರೆ. ಈಗಾಗಲೇ ಹೊಸ ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ 79.93 ಕೋಟಿ ಅನುದಾನ ಮಂಜೂರು ಆಗಿದೆ. ಅದು ಟೆಂಡರ್ ಹಂತದಲ್ಲಿದೆ. ಸ್ಥಳೀಯ ಶಾಸಕರು ತಿಳಿವಳಿಕೆ ಇಲ್ಲದೇ ಮಾತನಾಡುತ್ತಿದ್ದಾರೆ ಎಂದು ಸಚಿವ ಶ್ರೀರಾಮುಲು ಶಾಸಕ ಗಣೇಶ್ಗೆ ತಿರುಗೇಟು ನೀಡಿದ್ದಾರೆ.
ಜನಪ್ರತಿನಿಧಿಗಳು ತಮ್ಮ ರಾಜಕೀಯ ಮರೆತು ಬಹು ದಶಕಗಳ ಬೇಡಿಕೆಯಾಗಿರುವ ಕಂಪ್ಲಿ- ಗಂಗಾವತಿ ಹೊಸ ಸೇತುವೆ ನಿರ್ಮಾಣವಾಗಬೇಕಾಗಿದೆ. ಆ ಮೂಲಕ ಈ ಭಾಗದ ಜನರ ದಶಕಗಳ ಬೇಡಿಕೆ ಈಡೇರಿಸಬೇಕಾಗಿದೆ.
ಇದನ್ನೂ ಓದಿ: ಮುಳುಗಡೆಯತ್ತ ಗಂಗಾವತಿ-ಕಂಪ್ಲಿ ಸೇತುವೆ: ಜನ, ವಾಹನ ಸಂಚಾರ ನಿಷೇಧ