ಬಳ್ಳಾರಿ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿಯಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಮುಂದಾಗಿದ್ದು, ಹಂಪಿಯ 7 ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸುಸಜ್ಜಿತ ಶೌಚಾಲಯ ನಿರ್ಮಿಸಲು ಸಜ್ಜಾಗಿದೆ.
ಹಂಪಿ ಪ್ರವಾಸಿಗರನ್ನು ಸೆಳೆಯುವ ಐತಿಹಾಸಿಕ ತಾಣ. ಹಂಪಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕೂಡಲೇ ಅಗತ್ಯ ಸೌಲಭ್ಯ ಒದಗಿಸಬೇಕು ಎಂಬುದು ಪ್ರವಾಸಿಗರ ಒತ್ತಾಸೆಯೂ ಹೌದು. ಐತಿಹಾಸಿಕ ಸ್ಮಾರಕಗಳನ್ನು ಪ್ರವಾಸಿಗರು ವೀಕ್ಷಣೆ ಮಾಡುವ ಬಳಿಯಿರುವ ನಿರ್ಜನ ಪ್ರದೇಶದಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡೋದು ಸಾಮಾನ್ಯವಾಗಿತ್ತು. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಈ ಕಾರ್ಯಕ್ಕೆ ಮುಂದಾಗಿರೋದು ಶ್ಲಾಘನೀಯ.
ಹಂಪಿಯ ಏಳು ಕಡೆ ಅಗತ್ಯ ಸೌಲಭ್ಯ ಕಲ್ಪಿಸಲು ಸರ್ವೇಕ್ಷಣ ಇಲಾಖೆ ಈಗಾಗಲೇ ಸ್ಥಳಗಳನ್ನು ಗುರುತಿಸಿದ್ದು, ಶೌಚಾಲಯ ಹಾಗೂ ಶುದ್ಧ ನೀರಿನ ಘಟಕಗಳ ಸ್ಥಾಪನೆಯ ಕಾರ್ಯವೂ ಕೂಡ ಭರದಿಂದ ಸಾಗಿದೆ. ಹಂಪಿಯ ಚಂದ್ರಶೇಖರ ದೇಗುಲ, ವಿಜಯವಿಠ್ಠಲ ದೇಗುಲ, ಮಾಲ್ಯವಂತ, ಬಡವಿ ನರಸಿಂಹ ದೇಗುಲ, ಕಮಲ ಮಹಲ್ ಹಾಗೂ ಕಮಲಾಪುರದ ವಸ್ತು ಸಂಗ್ರಹಾಲಯ ಸಮೀಪ ಈ ಸುಸಜ್ಜಿತ ಶೌಚಾಲಯ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಾಪನೆಯಾಗಲಿವೆ. ಹಂಪಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗರೂ ಕೂಡ ಉಚಿತವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಹಂಪಿ ವೃತ್ತದ ಉಪಾಧೀಕ್ಷಕ ಎಂ.ಕಾಳಿಮುತ್ತು ತಿಳಿಸಿದ್ದಾರೆ.
ವಿಶೇಷ ಅಂದ್ರೆ ಶೌಚಾಲಯ, ಶುದ್ಧ ಕುಡಿಯುವ ನೀರು, ಮಹಿಳೆಯರ ಸಮವಸ್ತ್ರ ಬದಲಿಸುವ ಕೊಠಡಿ ಸೇರಿದಂತೆ ಇತರೆ ಸೌಲಭ್ಯಗಳು ಒಂದೇ ಸೂರಿನಡಿ ದೊರೆಯಲಿವೆ. ಹಂಪಿಗೆ ಭೇಟಿ ಕೊಡುವ ಪ್ರವಾಸಿಗರ ಸಂಖ್ಯೆಯೂ ಸಹ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. 2018-19ರಲ್ಲಿ ಕಮಲ ಮಹಲ್‍ಗೆ ಭಾರತದ 2,63,766 ಮಂದಿ ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ. ಹಾಗೇ 12,321 ಮಂದಿ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇನ್ನು ವಿಜಯ ವಿಠ್ಠಲ ದೇಗುಲಕ್ಕೆ 3,58,271 ಭಾರತೀಯ ಪ್ರವಾಸಿಗರು ಹಾಗೂ 18,490 ವಿದೇಶಿಗರು ಕಲ್ಲಿನ ರಥ ವೀಕ್ಷಿಸಿ ಕಣ್ತುಂಬಿಕೊಂಡಿದ್ದಾರೆ.
ಸಿಸಿಟಿವಿ ಕ್ಯಾಮರಾ ಅಳವಡಿಕೆ:
ಹಂಪಿ ಲೋಟಸ್ ಮಹಲ್ ಮತ್ತು ವಿಜಯ ವಿಠ್ಠಲ ದೇಗುಲದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಭದ್ರತೆ ಹೆಚ್ಚಿಸುವ ದೃಷ್ಟಿಯಿಂದ ಈ ಕ್ರಮಕ್ಕೆ ಪುರಾತತ್ವ ಇಲಾಖೆ ಮುಂದಾಗಿದೆ. ಸ್ಮಾರಕ ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಎಲ್ಲಾ ಸ್ಮಾರಕಗಳಿಗೂ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ಕಾಳಿಮುತ್ತು ತಿಳಿಸಿದ್ದಾರೆ.