ಬಳ್ಳಾರಿ: ರಾಜ್ಯದ ಗಮನ ಸೆಳೆದಿರುವ ಮಂಡ್ಯ ಕ್ಷೇತ್ರ ಸೇರಿದಂತೆ 22 ಲೋಕಸಭಾ ಕ್ಷೇತ್ರಗಳಲ್ಲೂ ಗೆಲುವು ನಮ್ಮದೇ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅವರ ಗೆಲುವು ನಿಶ್ಚಿತ ಎಂದರು.ಅಲ್ಲದೇ, ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಕೂಡ ಈ ಬಾರಿ ವಿಜಯದ ಪತಾಕೆ ಹಾರಿಸಲಿದ್ದಾರೆ. ಕಳೆದ ಉಪ ಚುನಾವಣೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪರಾಭವಗೊಂಡಿರುವುದು ಒಂದು ರೀತಿಯಲ್ಲಿ ಶಾಸಕ ಬಿ.ಶ್ರೀರಾಮುಲು ಅವರಿಗೆ ಬುದ್ಧಿ ಬಂದಿದೆ. ಹೀಗಾಗಿ ಬಳ್ಳಾರಿ ಲೋಕಸಭಾ ಕ್ಷೇತ್ರವನ್ನ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಅವರ ಮೇಲಿದೆ ಎಂದರು.
ಕಳೆದ 2014ರ ಲೋಕಸಭಾ ಚುನಾವಣೆಗೆ ಹೋಲಿಕೆ ಮಾಡಿದ್ರೆ ಈಗ ಮೋದಿ ಜನಪ್ರಿಯತೆ ಹೆಚ್ಚಾಗಿದೆ. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿದೆ. ರೈತರಿಗೆ ಯೋಜನೆ, ಆದಾಯ ತೆರಿಗೆ ದರದಲ್ಲಿ ಏರಿಕೆ, ವ್ಯಾಪಾರಸ್ಥರಿಗೆ ಕೊಟ್ಟ ಯೋಜನೆಗಳು ಅನುಕೂಲಕರವಾಗಿವೆ. ದೇಶದ 300 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಡೈರಿ ಪ್ರಕರಣ ಆರೋಪ ಶೋಭೆ ತರಲ್ಲ. ತನಿಖೆ ಮಾಡಿಸಿ, ಒಂದು ಅಂಶ ಸತ್ಯ ಇದ್ರೆ ನಾನು ರಾಜಕೀಯ ನಿವೃತ್ತಿ ಪಡೆಯುವೆ. ಇಲ್ಲ ನೀವು ಕ್ಷಮಾಪಣೆ ಕೇಳಿ ಎಂದು ಸವಾಲೆಸೆದರು. ಕಲುಬುರಗಿಯಲ್ಲಿ ಯಾವುದೇ ಗೊಂದಲ ಇಲ್ಲ. ಅಲ್ಲಿ ಕೂಡಾ ಗೆಲ್ಲುತ್ತೇವೆ. ಉಮೇಶ್ ಜಾಧವ್ ವಿಚಾರದಲ್ಲಿ ಸ್ಪೀಕರ್ ಒಳ್ಳೆಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿಯೇ ನಮಗೆ ವರದಾನ...
ರಾಜ್ಯದಲ್ಲಿ ಅಪ್ಪ-ಮಕ್ಕಳು ದೊಂಬರಾಟ ನಡೆಸುತ್ತಿದ್ದಾರೆ. ಚಲನಚಿತ್ರ ನಟರ ಬಗ್ಗೆ, ಅಂಬರೀಶ್ ಅವರ ಬಗ್ಗೆ ಕಾಂಗ್ರೆಸ್-ಜೆಡಿಎಸ್ ನಾಯಕರ ಮಾತುಗಳು ರಾಜ್ಯದ ಮೇಲೆ ಪರಿಣಾಮ ಬೀರುತ್ತಿವೆ. ಸುಮಲತಾ ಅವರ ವಿಚಾರದಲ್ಲಿ ಅವರು ನಡೆದುಕೊಳ್ಳುವ ರೀತಿ ಸರಿಯಿಲ್ಲ ಎಂದರು.
ಇನ್ನು ಸಿದ್ದರಾಮಯ್ಯ ಅವರ ಬಗ್ಗೆ ನಾನು ಟೀಕೆ ಮಾಡಲ್ಲ. ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಮೈತ್ರಿಕೂಟದ ಸರ್ಕಾರ ಇರಲ್ಲ. ಚುನಾವಣೆಯಲ್ಲಿ ನಾವು 22 ಸೀಟು ಗೆದ್ದ ಮೇಲೆ ಸಮ್ಮಿಶ್ರ ಸರ್ಕಾರದಲ್ಲಿ ಪರಸ್ಪರ ಬಡಿದಾಟ ಹೆಚ್ಚಾಗಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮೈತ್ರಿಯೇ ನಮಗೆ ವರದಾನವಾಗಲಿದೆ ಎಂದರು.