ಗಂಗಾವತಿ\ವಿಜಯನಗರ : ಜಲಾಶಯದಿಂದ ತುಂಗಭದ್ರಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ನದಿಪಾತ್ರದಲ್ಲಿನ ಹತ್ತಾರು ಗ್ರಾಮಗಳ ಸಾವಿರಾರು ಎಕರೆ ಜಮೀನುಗಳು ಜಲಾವೃತವಾಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಕಳೆದ ಒಂದು ವಾರದಿಂದ ನದಿಗೆ ಹೆಚ್ಚುವರಿ ನೀರು ಹರಿಸಲಾಗುತ್ತಿದೆ. ಸದ್ಯಕ್ಕೆ ನದಿಯಲ್ಲಿ 1.50 ಲಕ್ಷ ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದು, ನದಿಯಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿದೆ.
ಅಲ್ಲದೇ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ನದಿಪಾತ್ರದಲ್ಲಿನ ಗ್ರಾಮಗಳ ಹೊಲ-ತೋಟಗಳಿಗೆ ನೀರು ನುಗ್ಗಿದೆ. ಬಾಳೆ, ಭತ್ತದ ಬೆಳೆಗೆ ಹಾನಿಯಾಗಿದೆ. ತಾಲೂಕಿನ ಚಿಕ್ಕಜಂತಕ್ಕಲ್, ಹಿರೇಜಂತಕಲ್, ವಿನೋಭಾನಗರ, ನಾಗೇನಹಳ್ಳಿ, ದೇವಘಾಟ, ಸಂಗಾಪುರ, ವಿಪ್ರ, ಸಿಂಗನಗುಂಡು, ಅನೆಗೊಂದಿ, ಸಣಾಪೂರ ಸೇರಿ ವಿವಿಧ ಗ್ರಾಮದಲ್ಲಿ ಬೆಳೆ ಮತ್ತು ಭತ್ತ ಹಾನಿಯಾಗಿದೆ.
ವಿಜಯನಗರ ಜಿಲ್ಲೆಯ ಕೆಲವೆಡೆ ಅನಾಹುತ: ತುಂಗಭದ್ರಾ ಜಲಾಶಯದ ಒಳಹರಿವು ಇಂದು 1.65 ಲಕ್ಷ ಕ್ಯೂಸೆಕ್‌ಗೆ ಹೆಚ್ಚಾಗಿದ್ದು, ನದಿ ತೀರದ ಗ್ರಾಮಗಳ ನೂರಾರು ಎಕರೆ ಬೆಳೆ ಜಲಾವೃತವಾಗಿದೆ. ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಬನ್ನಿಮಟ್ಟಿ, ಚಿಕ್ಕಬನ್ನಿಮಟ್ಟಿ, ಬ್ಯಾಲಹುಣ್ಣಿ, ಅಂಗೂರು ಗ್ರಾಮಗಳ ನದಿ ತೀರದ ಹೊಲ ಗದ್ದೆಗಳಿಗೆ ಪ್ರವಾಹದ ನೀರು ನುಗ್ಗಿದ್ದು, ನೂರಾರು ಎಕರೆ ಭತ್ತ, ಕಬ್ಬು, ಮೆಕ್ಕೆಜೋಳ, ಅಡಿಕೆ ಬೆಳೆಗಳು ಜಲಾವೃತವಾಗಿವೆ.
ಪ್ರಸಿದ್ಧ ಸುಕ್ಷೇತ್ರ ಮದಲಗಟ್ಟಿ ಆಂಜನೇಯ ದೇವಸ್ಥಾನಕ್ಕೆ ಜಲದಿಗ್ಬಂಧನವಾಗಿದ್ದು, ಭಕ್ತರು ನೀರಿನಲ್ಲೇ ಹೋಗಿ ದರ್ಶನ ಪಡೆಯುತ್ತಿದ್ದಾರೆ. ಮಳೆ ಹೀಗೆ ಮುಂದುವರೆದರೆ ನದಿ ಪಾತ್ರದ ಇನ್ನಷ್ಟು ಗ್ರಾಮಗಳು ಮುಳುಗಡೆಯಾಗಲಿವೆ.
ಇದನ್ನೂ ಓದಿ : ಶಾಲೆಗೆ ತೆರಳಲು ಇದೇ ಮಾರ್ಗ.. ಜೀವ ಪಣಕ್ಕಿಟ್ಟು ಹಳ್ಳ ದಾಟಲೇಬೇಕು ರಾಯಚೂರಿನ ವಿದ್ಯಾರ್ಥಿಗಳು