ಬಳ್ಳಾರಿ: ಕಳೆದ ಮೂರು ದಿನಗಳಿಂದ ಆಂಧ್ರ ಪ್ರದೇಶದ ಗಡಿ ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಇದರಿಂದ ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಡೊನೆಕಲ್ ಗ್ರಾಮದ ಬಳಿಯ ಕೆಳ ಮಟ್ಟದ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಈ ಮಾರ್ಗದಲ್ಲಿ ಸಂಚಾರ ಸಾಧ್ಯವಿಲ್ಲದ ಕಾರಣ ಬಳ್ಳಾರಿ ತಾಲೂಕಿನಿಂದ ಗಡಿ ಭಾಗದ ಹಳ್ಳಿಗಳಿಗೂ ಮತ್ತು ಆಂಧ್ರದ ಗುಂತಕಲ್, ಗುತ್ತಿ ತಿರುಪತಿ, ಗುಂಟೂರು, ವಿಜಯವಾಡ, ನಗರಗಳಿಗೆ ಹೋಗುವ ವಾಹನಗಳು ಉರವಗೊಂಡ ಹಾಗೂ ಆಲೂರು ಮಾರ್ಗವಾಗಿ 35 ರಿಂದ 40ಕಿ.ಮೀ ಸುತ್ತಿ ಬಳಸಿ ತೆರಳುತ್ತಿವೆ.
ಡೊನೆಕಲ್ ಗ್ರಾಮದ ಬಳಿಯ ಹಳ್ಳದ ಕೆಳಮಟ್ಟದ ಸೇತುವೆ ಮಳೆ ನೀರಿನಲ್ಲಿ ಮುಳುಗಿದ್ದರಿಂದ ರಸ್ತೆ ಕಾಣದಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕಳೆದ ಎರಡು ದಿನಗಳಿಂದ ಈ ರಸ್ತೆಯಲ್ಲಿ ಕರ್ನಾಟಕ, ಆಂಧ್ರ ಸಾರಿಗೆ ಬಸ್, ಹಾಗೂ ವಾಹನಗಳು ಸಂಚರಿಸುತ್ತಿಲ್ಲ. ಆದರೆ ಲಾರಿಗಳು ಅಪಾಯದಲ್ಲಿ ಸಂಚಾರ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ.
ಬಳ್ಳಾರಿ-ಗುತ್ತಿ ರಾಷ್ಟ್ರೀಯ ಹೆದ್ದಾರಿ-67 ಕಾಮಗಾರಿ ಕಳೆದ 5 ವರ್ಷದಿಂದ ನಡೆಯುತ್ತಲೇ ಇದೆ. ಇನ್ನು ಹೊಸ ಸೇತುವೆ ನಿರ್ಮಾಣದ ಕಾಮಗಾರಿ ಸಹ 5 ವರ್ಷ ಕಳೆದರೂ ಕೂಡಾ ಪೂರ್ಣವಾಗದಿರುವುದು ವಿಪರ್ಯಾಸ.
ಇದನ್ನೂ ಓದಿ: ಪ್ರವಾಹದ ನೀರಲ್ಲಿ ಕೊಚ್ಚಿಹೋದ ಪೊಲೀಸರು: ಒಬ್ಬರ ಶವ ಪತ್ತೆ.. ಇನ್ನೊಬ್ಬರು ನಾಪತ್ತೆ!