ಹೊಸಪೇಟೆ: ಯಾವ ಸಮಯಕ್ಕೆ ಮಳೆ ಬೇಕೋ ಆಗ ಸರಿಯಾಗಿ ಮಳೆಯಾಗುವುದಿಲ್ಲ. ಯಾವ ಸಮಯಕ್ಕೆ ಮಳೆ ಬೇಡವೋ ಆ ಸಂದರ್ಭದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಗಾದೆಯಂತೆ ಹೊಸಪೇಟೆಯಲ್ಲಿ ಬೆಳೆದ ಬೆಳೆಯೆಲ್ಲಾ ಸಂಪೂರ್ಣ ನೀರು ಪಾಲಾಗಿದೆ.
ವರುಣನ ಆರ್ಭಟಕ್ಕೆ ಹೊಸಪೇಟೆ ತಾಲೂಕಿನಾದ್ಯಂತ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಆದರೆ, ಇಲ್ಲಿ ಆಗಿರುವುದೇನೆಂದರೆ, ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಹಾಗೆ ಕಷ್ಟಪಟ್ಟು ಬೆಳದಿದ್ದ ಟೊಮ್ಯಾಟೊ, ಕಬ್ಬು, ಮೆಕ್ಕೆಜೋಳ ಸೇರಿ ವಿವಿಧ ಬೆಳೆಗಳು ಸಂಪೂರ್ಣ ಜಲಾವೃತವಾಗಿವೆ.
ನಗರದ ರಾಯರ ಕೆರೆ ತುಂಬಿದ ಹಿನ್ನೆಲೆ ಕೃಷಿಯ ಜಮೀನುಗಳಿಗೆ ನೀರು ನುಗ್ಗಿದ್ದು, ರೈತರು ವರ್ಷಪೂರ್ತಿ ಕಷ್ಟಪಟ್ಟಿರುವುದೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಮುಂಚೆ ರೈತರ ಹೊಲಗಳ ನಾಲೆಯಿಂದಾಗಿ ಸುಲಭವಾಗಿ ನೀರು ಹರಿದು ಹೋಗುತ್ತಿತ್ತು. ಆದರೆ, 13ನೇ ರಾಷ್ಟ್ರೀಯ ಹೆದ್ದಾರಿ ಎತ್ತರಿಸಿದ ಪರಿಣಾಮದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿಕ್ಕಚಿಕ್ಕ ಹಳ್ಳ ಕೊಳ್ಳದ ನೀರೆಲ್ಲ ಜಮೀನುಗಳಿಗೆ ಹರಿಯುತ್ತಿವೆ ಎಂದು ರೈತರು ನೋವು ತೋಡಿಕೊಳ್ಳುತ್ತಾರೆ.
ಕೃಷಿಯನ್ನೇ ಅವಲಂಬಿಸಿಕೊಂಡು ಜೀವನ ಸಾಗಿಸುವವರಿಗೆ ಈ ರೀತಿ ಅನಾಹುತಗಳಾದರೆ ಸಾಲ ಮಾಡಿದವರ ಗತಿ ಏನು? ಇಷ್ಟೆಲ್ಲ ಘಟಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಕೈಕಟ್ಟಿ ಕೂತಿದ್ದಾರೆ. ರೈತರು ಮಳೆಯಿಂದಾಗಿ ವನವಾಸ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರೈತ ಸಂಗಪ್ಪ.