ಬಳ್ಳಾರಿ : ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರ ಸಂಬಂಧಿ ಎರ್ರಿಸ್ವಾಮಿಯು ಬಳ್ಳಾರಿ ಪಾಲಿಕೆ ಮೇಯರ್ ಪಟ್ಟ ಕೊಡಿಸುವುದಾಗಿ ಹೇಳಿ 30ನೇ ವಾರ್ಡ್ನ ಕಾಂಗ್ರೆಸ್ ಕಾರ್ಪೊರೇಟರ್ ಆಸೀಫ್ ಬಳಿ ಬರೋಬ್ಬರಿ ಮೂರುವರೆ ಕೋಟಿ ರೂ. ಪಡೆದು ವಂಚಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸ್ವತಃ ಆಸೀಫ್ ಬಳ್ಳಾರಿ ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಎರ್ರಿಸ್ವಾಮಿ ಆಸೀಫ್ನಿಂದ ಹಣ ಪಡೆದ ಕೆಲವೇ ತಿಂಗಳಲ್ಲಿ ಸಾಮಾನ್ಯ ವರ್ಗದ ಮಹಿಳೆಗೆ ಮೇಯರ್ ಸ್ಥಾನ ಮೀಸಲಾಗಿದೆ. ಆಸೀಫ್ಗೆ ಮೇಯರ್ ಪಟ್ಟ ಸಿಗಲಿಲ್ಲ. ಹೀಗಾಗಿ, ಹಣ ವಾಪಸ್ ಕೊಡುವಂತೆ ಎರ್ರಿಸ್ವಾಮಿಗೆ ಅನೇಕ ಬಾರಿ ಕೇಳಿದರೂ ಕ್ಯಾರೇ ಎನ್ನುತ್ತಿಲ್ಲ. ಅಲ್ಲದೇ ಹಣ ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಅಂತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನೂ ದೂರು ಕೊಟ್ಟ ಬಳಿಕ ಆಸೀಫ್ ಅಜ್ಞಾತ ಸ್ಥಳಕ್ಕೆ ತೆರಳಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಇತ್ತ ಎರ್ರಿಸ್ವಾಮಿ ಕೂಡ ಅನಾರೋಗ್ಯದ ನೆಪ ಹೇಳಿ ಬಳ್ಳಾರಿ ಬಿಟ್ಟಿದ್ದಾರೆ. ಪೊಲೀಸರು ಅಸೀಫ್ ದೂರು ಆಧರಿಸಿ ಎರ್ರಿಸ್ವಾಮಿ ವಿರುದ್ಧ ಐಪಿಸಿ 420 ಹಾಗೂ 506 ಅಡಿ ಪ್ರಕರಣ ದಾಖಲಿಕೊಂಡು ತನಿಖೆ ಆರಂಭಿಸಿದ್ದಾರೆ.
ಇಬ್ಬರಿಗೂ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ. ವಿಚಾರಣೆಯಲ್ಲಿ ಅರ್ಜಿದಾರರಿಗೆ ಇಷ್ಟೊಂದು ದೊಡ್ಡ ಮೊತ್ತದ ಹಣ ಎಲ್ಲಿಂದ ಬಂತು? ಹೇಗೆ ಬಂತು? ಎಂಬ ಬಗ್ಗೆ ಪರಿಶೀಲಿಸಲಾಗುವುದು ಎಂದು ಎಸ್ಪಿ ಸೈದುಲ್ ಅಡಾವತ್ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಎಸ್ವೈ ಭೇಟಿ ಮಾಡಿದ ಸಿಎಂ ಬೊಮ್ಮಾಯಿ: ಚುನಾವಣೆ ಕುರಿತು ಉಭಯ ನಾಯಕರ ಚರ್ಚೆ
ಇತ್ತ ಈ ಪ್ರಕರಣದ ಬಗ್ಗೆ ಕಾಂಗ್ರೆಸ್ ಕಿಡಿಕಾರಿದ್ದು, ಅಸೀಫ್ ಹಾಗೂ ಎರ್ರಿಸ್ವಾಮಿ ನಡುವೆ ಬೇರೆ ಜಗಳವಿತ್ತು. ಅದರ ದುರುಪಯೋಗ ಪಡೆದು ಅಸೀಫ್ನನ್ನು ಎತ್ತಿ ಕಟ್ಟಲಾಗಿದೆ. ಇದರ ಹಿಂದೆ ಸಚಿವ ಶ್ರೀರಾಮುಲು ಕೈವಾಡವಿದೆ ಅಂತಾ ಆರೋಪಿಸಿದೆ.
ಅಲ್ಲದೇ ಬಳ್ಳಾರಿ ಗ್ರಾಮೀಣಕ್ಕೆ ರಾಮುಲು ಸ್ಪರ್ಧೆ ಮಾಡಲು ಮುಂದಾಗಿದ್ದಾರೆ. ಕಾಂಗ್ರೆಸ್ ಶಾಸಕ ನಾಗೇಂದ್ರ ಅವರ ಇಮೇಜ್ ಕೆಡಿಸಲು ಈ ಷಡ್ಯಂತ್ರ ಮಾಡಲಾಗಿದೆ ಎಂದು ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಜೆ.ಎಸ್ ಆಂಜಿನೇಯಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.