ಬಳ್ಳಾರಿ : ಬಡವರ ಹಸಿವು ನೀಗಿಸಬೇಕಾಗಿದ್ದ ಸಾವಿರಾರು ಕ್ವಿಂಟಾಲ್ ಪಡಿತರ ಜೋಳ ಅಕ್ರಮ ಪ್ರಕರಣಕ್ಕೆ ಮತ್ತಷ್ಟು ಅಧಿಕಾರಿಗಳು ಬಂಧನ ಭೀತಿ ಎದುರಿಸುವಂತಾಗಿದೆ. ಸರ್ಕಾರಿ ಗೋದಾಮು ಅಧಿಕಾರಿಗಳು, ಟ್ರೇಡರ್ಸ್ ಸೇರಿದಂತೆ ಈಗ ಹೆಚ್ಚುವರಿ 16 ಜನರ ವಿರುದ್ದ ಎಫ್ಐಆರ್ ದಾಖಲಾಗಿದೆ. ಇತ್ತ ಎಫ್ಐಆರ್ ದಾಖಲಾಗುತ್ತಿದ್ದಂತೆ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.
ಬಳ್ಳಾರಿ ಮತ್ತು ಸಿರುಗುಪ್ಪ ತಾಲೂಕಿನ ಸರ್ಕಾರಿ ಗೋದಾಮುನಲ್ಲಿ ಸಂಗ್ರಹಿಸಿದ್ದ ಸಾವಿರಾರು ಪಡಿತರ ಜೋಳ ನಾಪತ್ತೆಯಾಗಿರುವ ಪ್ರಕರಣ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಿರುಗುಪ್ಪದ ಕೆಎಫ್ಸಿಎಸ್ಸಿ ಗೋದಾಮುನಲ್ಲಿ 7,282 ಕ್ವಿಂಟಾಲ್ ಹಾಗೂ ಬಳ್ಳಾರಿ ಎಸ್ಡಬ್ಲ್ಯೂಸಿ ಗೋದಾಮುನಲ್ಲಿ 1,237.42 ಜೋಳ ನಾಪತ್ತೆಯಾಗಿತ್ತು. ಈ ಸಂಬಂಧ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಗೋದಾಮು ವ್ಯವಸ್ಥಾಪಕ ಬಸವರಾಜ ಹಾಗೂ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೆಎಫ್ಸಿಎಸ್ಸಿ ಜಿಲ್ಲಾ ವ್ಯವಸ್ಥಾಪಕ ನಾರಾಯಣಸ್ವಾಮಿ ಹಾಗೂ ಖರೀದಿ ಅಧಿಕಾರಿ ಶಿವೇಗೌಡ ವಿರುದ್ದ ಪ್ರಕರಣ ದಾಖಲಾಗಿತ್ತು.
ಈಗಾಗಲೇ ಸಿರುಗುಪ್ಪ ಪೊಲೀಸರು ಗೋದಾಮು ವ್ಯವಸ್ಥಾಪಕ ಬಸವರಾಜ್ರನ್ನು ಬಂಧಿಸಿದ್ದಾರೆ. ಮತ್ತೊಂದೆಡೆ ನಾರಾಯಣಸ್ವಾಮಿ ಅನಾರೋಗ್ಯದ ನೆಪವೊಡ್ಡಿ ಬೆಂಗಳೂರು ಆಸ್ಪತ್ರೆಗೆ ದಾಖಲಾಗಿದ್ದು, ಶಿವೇಗೌಡ ನಾಪತ್ತೆಯಾಗಿದ್ದಾರೆ. ಇನ್ನೂ ತನಿಖೆ ಕೈಗೆತ್ತಿಕೊಂಡಿರುವ ಸಿರುಗುಪ್ಪ ಪೊಲೀಸರು ಈಗ ಆಹಾರ ಇಲಾಖೆ ಅಧಿಕಾರಿಗಳು ಟ್ರೇಡರ್ಸ್ ಸೇರಿದಂತೆ ಒಟ್ಟು 16 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಇನ್ನೂ ಅಧಿಕಾರಿಗಳು ಸೇರಿದಂತೆ 16 ಜನರ ವಿರುದ್ದ ಪ್ರಕರಣ ದಾಖಲಾಗುತ್ತಿಂದೆಯೇ ಎಲ್ಲರೂ ತಲೆಮರೆಯಿಸಿಕೊಂಡಿದ್ದಾರೆ. ಇವರ ಪತ್ತೆಗಾಗಿ ಮೂರು ಪೊಲೀಸ್ ತನಿಖಾ ತಂಡಗಳನ್ನ ರಚನೆ ಮಾಡಲಾಗಿದೆ. ಶೀಘ್ರದಲ್ಲಿ ಆರೋಪಿಗಳನ್ನ ಬಂಧಿಸುವ ಸಾಧ್ಯತೆ ಇದೆ. ಆದರೆ ಈ ಪ್ರಕರಣದಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳು ಇದ್ದಾರೆ ಎನ್ನಲಾಗುತ್ತಿದೆ.
ಹೀಗಾಗಿ ಈ ಪ್ರಕರಣ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, ಸಮಗ್ರ ತನಿಖೆಯಾಗಬೇಕಾಗಿದೆ. ಪ್ರಸಕ್ತ ಸಾಲಿನಲ್ಲಿ ಮಾತ್ರ ಸಾವಿರಾರು ಕ್ವಿಂಟಾಲ್ ಜೋಳ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಆದರೆ ಇದು ಹಲವು ವರ್ಷಗಳಿಂದಲೂ ಪಡಿತರ ಜೋಳದಲ್ಲಿ ಅಧಿಕಾರಿಗಳು ಅಕ್ರಮ ಮಾಡುತ್ತಲೇ ಬಂದಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಅಂತಿದ್ದಾರೆ ಹೋರಾಟಗಾರರು.
ಪಡಿತರ ಜೋಳ ಅಕ್ರಮ ಪ್ರಕರಣ ಸದ್ಯ ಗಣಿನಾಡಿನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಮೇಲಧಿಕಾರಿಗಳು ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಅನ್ನೋ ಆರೋಪಗಳು ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಬಡವರಿಗೆ ಸೇರಬೇಕಿದ್ದ ಪಡಿತರ ಜೋಳದಲ್ಲೂ ಅಕ್ರಮ ಎಸಗಿರುವವರ ವಿರುದ್ಧ ಕಠಿಣ ಶಿಕ್ಷೆಯಾಗಬೇಕಾಗಿದೆ. ಆ ಮೂಲಕ ಇಂತಹ ಅಕ್ರಮಗಳಿಗೆ ಬ್ರೇಕ್ ಹಾಕಬೇಕಾಗಿದೆ.
ಇದನ್ನೂ ಓದಿ : ಗೋವಾದಿಂದ ಹೈದರಾಬಾದ್ಗೆ 26.29 ಲಕ್ಷ ಮೌಲ್ಯದ ಅಕ್ರಮ ಮದ್ಯ ಸಾಗಣೆ : ಒಬ್ಬನ ಬಂಧನ