ಬಳ್ಳಾರಿ: ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ವರ್ಸಸ್ ಸಚಿವ ಶ್ರೀರಾಮುಲು ಅಂತಾಗಲಿ ಸಮುದಾಯಗಳನ್ನು ರಾಜಕೀಯಕ್ಕೆ ತರುವುದು ಬೇಡ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.
ಜಿಲ್ಲೆಯ ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಿಮಿತ್ತ ಕಾರಿಗನೂರು ಗ್ರಾಮದಲ್ಲಿಂದು ಬಿಜೆಪಿ ಅಭ್ಯರ್ಥಿ ಆನಂದ ಸಿಂಗ್ ಪರವಾಗಿ ಪ್ರಚಾರ ಕೈಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರುಬ ಸಮುದಾಯವನ್ನು ರಾಜಕೀಯದ ಮಧ್ಯೆ ತರೋದು ಬೇಡ. ಕೇವಲ ಸಿದ್ಧರಾಮಯ್ಯ ವರ್ಸಸ್ ಶ್ರೀರಾಮುಲು ಅಂತಾಗಲಿ. ಅನಗತ್ಯವಾಗಿ ಕುರುಬ ಸಮುದಾಯದವರನ್ನ ಎಳೆದು ತರಬಾರದು ಎಂದರು. ಮಾಜಿ ಸಿಎಂ ಸಿದ್ದರಾಮಯ್ಯ ಏನು ಅನ್ನೋದನ್ನು ಅವರ ಶಿಷ್ಯಂದಿರೇ ಹೇಳ್ತಾರೆ. ಎಂ.ಟಿ.ಬಿ.ನಾಗರಾಜ, ಭೈರತಿ ಬಸವರಾಜ, ಮುನಿರತ್ನ ಅವರೇ ಎಲ್ಲವನ್ನೂ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಹೌದು ನಾನು ಪೆದ್ದ ನಿಜ, ಭ್ರಷ್ಟಾಚಾರ, ನಂಬಿಕೆ ದ್ರೋಹ, ವಂಚನೆ ಮಾಡೋದ್ರಲ್ಲಿ ನಾನು ಪೆದ್ದ. ಆ ವಿಚಾರದಲ್ಲಿ ಅವರಷ್ಟು ಬುದ್ಧಿವಂತ ನಾನಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಏನೇನು ಭ್ರಷ್ಟಾಚಾರ ನಡೆದಿದೆ ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ. ಸಿದ್ದರಾಮಯ್ಯನವರು ಬಹಳ ಬುದ್ಧಿವಂತರು, ಆದರೆ ಅವರು ಯಾವ ನಾಯಕರನ್ನು ಬೆಳೆಸಿದ್ದಾರೆ ಎಂದು ಹೇಳಲಿ?. ಇಂದು ಕಾಂಗ್ರೆಸ್ ಏನಾಗಿದೆ ಎಂಬುದನ್ನು ಎಂದು ಪರಮೇಶ್ವರ ಅವರೇ ಒಪ್ಪಿಕೊಂಡಿದ್ದಾರೆ. ಇವತ್ತು ಸಿದ್ದರಾಮಯ್ಯ ಜೊತೆಗೆ ಪರಮೇಶ್ವರ್ ಇಲ್ಲ. ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ಬಿ.ಕೆ.ಹರಿಪ್ರಸಾದ್ ಯಾರೂ ಇಲ್ಲ. ದಲಿತ ಮುಖಂಡರನ್ನು ಬೆಳೆಸುವ ಕೆಲಸವನ್ನು ಸಿದ್ದರಾಮಯ್ಯ ಮಾಡಲಿಲ್ಲ ಎಂದು ಆರೋಪಿಸಿದರು.
ನಾನು ಪಕ್ಷದಿಂದ, ನನ್ನ ಜನರ ಆಶೀರ್ವಾದದಿಂದ ಬೆಳೆದವನು. ಪಕ್ಷ ಇವತ್ತು ಜವಾಬ್ದಾರಿ ನೀಡಿದೆ, ಅದರಂತೆ ಕೆಲಸ ಮಾಡುತ್ತಿದ್ದೇನೆ. ನಿಮಗೆ ನಿಮ್ಮ ಪಕ್ಷ ಏನು ಜವಾಬ್ದಾರಿ ನೀಡಿದೆ ಎಂದು ಹೇಳಿ. ಪದೇ ಪದೇ ಈ ರೀತಿ ಮಾತನಾಡುವುದು ಸರಿಯಲ್ಲ. ಸಿದ್ದರಾಮಯ್ಯ ಹಿರಿಯರು, ಆಗಾಗ ಶ್ರೀರಾಮುಲುಗೆ ಡಿಸಿಎಂ ಹುದ್ದೆ ಸಿಕ್ಕಲ್ಲ ಅಂತಾರೆ. ನಮ್ಮ ನಿಮ್ಮ ನಡುವಿನ ಈ ಹೇಳಿಕೆಗಳು ಜಾತಿಗಳ ನಡುವೆ ಹೋಗೋದು ಬೇಡ. ಆರೋಪಗಳು ನನ್ನ ಮತ್ತು ನಿಮ್ಮ ನಡುವೆ ವೈಯಕ್ತಿಕವಾಗಿರಲಿ. ಜಾತಿಗಳ ನಡುವೆ ಸಂಘರ್ಷ ಆಗೋದು ಬೇಡ ಎಂದರು.