ಬಳ್ಳಾರಿ: ಕೊಟ್ಟೂರು ತಾಲೂಕಿನ ಚಪರದಹಳ್ಳಿ ಗ್ರಾಮದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ರೈತಪರ ಸಂಘಟನೆಗಳು ಪತ್ರ ಚಳುವಳಿ ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ರೈತ ಕೋಗಳಿ ಮಲ್ಲೇಶ್ ಮಾತನಾಡಿ, ಭೂಸುಧಾರಣಾ ಕಾಯ್ದೆ ವಿರೋಧಿಸಿ ಚಪ್ಪರದಹಳ್ಳಿ, ಹ್ಯಾಳ್ಯಾ ಗ್ರಾಮದಲ್ಲಿ ರೈತಪರ ಸಂಘಟನೆಗಳು ಪತ್ರ ಮುಖೇನ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಕಾಯ್ದೆಯನ್ನು ಹಿಂಪಡೆಯಬೇಕು, ಇಲ್ಲದಿದ್ದರೆ ರಾಜ್ಯವ್ಯಾಪ್ತಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು. 'ನಮ್ಮೂರ ಭೂಮಿ ನಮಗಿರಲಿ, ಅನ್ಯರಿಗಲ್ಲ' ಎನ್ನುವ ಘೋಷ ವಾಕ್ಯದೊಂದಿಗ ಗ್ರಾಮದ ರೈತರು ಪತ್ರಗಳನ್ನು ಬರೆದು ಚಳುವಳಿ ನಡೆಸಿದರು. ಇಕ್ರಾ ಸಂಸ್ಥೆ ಹಾಗೂ ವಿವಿಧ ರೈತಪರ ಸಂಘಟನೆಗಳು ಈ ವೇಳೆ ಭಾಗಿಯಾಗಿದ್ದವು.
ರೈತ ಮುಖಂಡರಾದ ಕಡೆಕೊಳ ಕೊಟ್ರೇಶಿ, ಮತ್ತಿಹಳ್ಳಿ ಕೊಟ್ರಪ್ಪ, ಬಿಸ್ನಳ್ಳಿ ನಿಂಗಪ್ಪ, ಧರ್ಮ ಕೊಟ್ರೇಶ, ಶ್ರೀಕಾಂತ್, ಕೊಟ್ರಪ್ಪ, ಕೆ.ಮಂಜುನಾಥ, ಎನ್.ಬಸವರಾಜ, ಜಿ.ಸುರೇಶ ಗೌಡ, ಮೂಡಿ ಪ್ರಕಾಶ್ ಉಪಸ್ಥಿತರಿದ್ದರು.