ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಾಣ್ಯಾಪುರದಲ್ಲಿ ಅಕ್ರಮ ಮರಳು ದಂಧೆ ಅಧಿಕವಾಗಿದ್ದು, ಈ ದಂಧೆಕೋರರು ಮರಳಿನ ಜೊತೆಗೆ ರೈತರ ಪಂಪ್ಸೆಟ್ ಸಾಮಗ್ರಿಗಳನ್ನೂ ದೋಚುತ್ತಿದ್ದಾರೆ. ರೈತರ ಜಮೀನುಗಳಲ್ಲಿ ಟ್ರ್ಯಾಕ್ಟರ್ಗಳನ್ನು ಬೇಕಾಬಿಟ್ಟಿಯಾಗಿ ಓಡಿಸಿ ಬೆಳೆ ಹಾಳು ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ನಾಣ್ಯಾಪುರ ಗ್ರಾಮಸ್ಥರು ಹಾಗೂ ರೈತರು ಕೂಡ್ಲಿಗಿ ಪೊಲೀಸರಲ್ಲಿ ಅಕ್ರಮ ಮರಳುಗಾರಿಕೆ ಮಾಡುವವರನ್ನು ಬಂಧಿಸಿ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿಕೊಂಡರು. ಈ ಬಗ್ಗೆ ಅನೇಕ ಬಾರಿ ಪೊಲೀಸರಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಶೀಘ್ರವೇ ಮರಳುಗಳ್ಳರಿಗೆ ಮಟ್ಟಹಾಕದಿದ್ದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಹಗರಿಬೊಮ್ಮನ ಹಳ್ಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅನೇಕ ಮರಳುಗಳ್ಳರಿದ್ದಾರೆ. ಗ್ರಾಮಗಳ ಹೊರವಲಯದಲ್ಲಿರುವ ಹಳ್ಳಗಳಿಗೆ ರಾತ್ರಿ ಹೊತ್ತಲ್ಲಿ ಮರಳು ಸಾಗಿಸುತ್ತಿದ್ದಾರೆ. ಜಮೀನುಗಳಲ್ಲಿರುವ ಪಂಪ್ಸೆಟ್ಗಳ ದುಬಾರಿ ಬೆಲೆಯ ಸಾಮಗ್ರಿಗಳನ್ನು ಎಗರಿಸಿಕೊಂಡು ಹೋಗುತ್ತಿದ್ದಾರೆ. ಆದ್ದರಿಂದ ಮರಳುಗಳ್ಳರ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಕೇಳಿಕೊಂಡಿದ್ದಾರೆ.
ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮರಳು ದಂಧೆಗೆ ಕಡಿವಾಣ ಹಾಕಲು ಮನವಿ ಮಾಡಿದ್ದರೂ ಕಳ್ಳರನ್ನು ಹಿಡಿದು ಅವರಿಂದ ಹಣ ಪಡೆದು ಬಿಟ್ಟು ಕಳುಹಿಸುತ್ತಿದ್ದಾರೆ ಎಂದು ದೂರಿದ್ದಾರೆ. ಮರಳುಗಳ್ಳರ ಹಾವಳಿ ಮುಂದುವರಿದರೆ ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಎಸ್ಪಿಗೆ ದೂರು ನೀಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.