ವಿಜಯನಗರ: ಹೊಸಪೇಟೆಯ ಜನರ ಮೇಲೆ ವಿಶೇಷ ಅಭಿಮಾನ, ಪ್ರೀತಿ ಹೊಂದಿದ್ದ ಪುನೀತ್ ರಾಜಕುಮಾರ್ ಅವರು, ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದರು. ಯಾರು ಕೈ ಬಿಟ್ಟರೂ ಹೊಸಪೇಟೆ ಜನರು ಎಂದಿಗೂ ಕೈ ಬಿಡುವುದಿಲ್ಲ ಎಂದು ಅಭಿಮಾನದಿಂದ ನುಡಿದಿದ್ದರು.
ಹೊಸಪೇಟೆ ಜನರ ಮನ ಗೆದ್ದಿದ್ದ ಅವರನ್ನು ಮರೆಯಲು ಸಾಧ್ಯವಿಲ್ಲ. ಜಿಲ್ಲಾ ಕ್ರೀಡಾಂಗಣಕ್ಕೆ ಪುನೀತ್ ಅವರ ಹೆಸರಿಟ್ಟು ಅವರಿಗೆ ಗೌರವ ಸಲ್ಲಿಸುವ ಕೆಲಸ ಮಾಡಬೇಕು ಎಂದು ಅಭಿಮಾನಿಗಳು ಸಚಿವ ಆನಂದ ಸಿಂಗ್, ನಗರಸಭೆಯ ಅಧ್ಯಕರು ಹಾಗೂ ಸದಸ್ಯರಿಗೆ ಒತ್ತಾಯಿಸಿದ್ದರು. ಅಲ್ಲದೇ, ಪುನೀತ್ ಹಾಗೂ ಸಚಿವ ಆನಂದ ಸಿಂಗ್ ನಡುವೆ ಉತ್ತಮ ಒಡನಾಟ ಇತ್ತು. ಹಾಗಾಗಿ, ಜಿಲ್ಲಾ ಕ್ರೀಡಾಂಗಣಕ್ಕೆ ಹಾಗೂ ನಗರದ ಪ್ರಮುಖ ವೃತ್ತವೊಂದಕ್ಕೆ ಅವರ ಹೆಸರಿಡಬೇಕು ಎಂಬ ಕೂಗು ಜೋರಾಗಿತ್ತು.
ಪುನೀತ್ ರಾಜ್ ಕುಮಾರ್ ಅವರ ಮೇಲೆ ಅಪಾರ ಅಭಿಮಾನ ಇಟ್ಟುಕೊಂಡಿರುವ ಹೊಸಪೇಟೆ ಜನ ಜಿಲ್ಲಾ ಕ್ರೀಡಾಂಗಣಕ್ಕೆ ಹಾಗೂ ನಗರದ ಹೃದಯ ಭಾಗದಲ್ಲಿರುವ ವೃತ್ತಕ್ಕೆ ಪುನೀತ್ ರಾಜ್‌ಕುಮಾರ್ ವೃತ್ತ ಎಂದು ನಾಮಕರಣ ಮಾಡಿದ್ದಾರೆ. ಇದೀಗ ಈ ವೃತ್ತದಲ್ಲಿ ನಾಳೆ (ಜೂ.5ರಂದು) ಪುನೀತ್ ಅವರ ಏಳು ಅಡಿ ಎತ್ತರದ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಲಿದ್ದಾರೆ.
ಆಂಧ್ರ ಪ್ರದೇಶದ ತೆನಾಲಿಯ ಗುಂಟೂರಿನ ನಿರ್ಮಿಸಲಾಗಿರುವ 7.4 ಅಡಿ ಎತ್ತರದ ಅಪ್ಪು ಕಂಚಿನ ಪುತ್ಥಳಿಯನ್ನು ನಗರಕ್ಕೆ ಈಗಾಗಲೇ ತರಲಾಗಿದೆ. ನಾಳೆ ಡಾ.ರಾಜ್ ಕುಟುಂಬದವರು ಕಂಚಿನ ಪುತ್ಥಳಿ ಅನಾವರಣ ಮಾಡಲಿದ್ದಾರೆ. ರಾಜ್ ಕುಟುಂಬದ ಸದಸ್ಯರು, ನಟರಾದ ಶ್ರೀಮುರಳಿ, ಅಜಯ್‌ರಾವ್, ನಿರ್ದೇಶಕರಾದ ಸಂತೋಷ್ ಆನಂದ್‌ರಾಮ್, ಚೇತನ್ ಕುಮಾರ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮತ್ತು ಅವರ ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.