ವಿಜಯನಗರ: ಚಾರ್ಜ್ ಹಾಕಿದ್ದ ವೇಳೆ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟಗೊಂಡು ಹೊತ್ತಿ ಉರಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕೊಟ್ಟೂರು ತಾಲೂಕಿನ ಕೋಡಿಹಳ್ಳಿಯ ಪತ್ರಕರ್ತ ಉಜ್ಜಿನಿ ರುದ್ರಪ್ಪ ಎಂಬುವರ ಮನೆಯ ಅಂಗಳದಲ್ಲಿ ಶುಕ್ರವಾರ ಎಲೆಕ್ಟ್ರಿಕ್ ಸ್ಕೂಟರ್ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಚಾರ್ಜಿಂಗ್ ವೇಳೆ ಸ್ಫೋಟ: ಚಾರ್ಜ್ ಹಾಕಿದ್ದ ವೇಳೆ ಸ್ಕೂಟರ್ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದರಿಂದ ಕುಟುಂಬಸ್ಥರು ಭಯಭೀತರಾಗಿದ್ದರು. ಬೈಕ್ ಹೊತ್ತಿ ಉರಿದ ದೃಶ್ಯ ಕಂಡ ಕೂಡಲೇ ಸ್ಥಳೀಯರು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಆದರೂ ಸ್ಕೂಟರ್ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಪೆಟ್ರೋಲ್ ಬೆಲೆ ಏರಿಕೆಯಿಂದ ಉಜ್ಜಿನಿ ರುದ್ರಪ್ಪ ಇತ್ತಿಚಿಗೆ ಬ್ಯಾಟರಿ ಚಾಲಿತ ಸ್ಕೂಟರ್ ಖರೀದಿಸಿದ್ದರು. ಆದರೆ, ಇದೀಗ ಅದು ಹೊತ್ತಿ ಉರಿದಿದೆ. ಕೊಟ್ಟೂರು ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
ಎಲೆಕ್ಟ್ರಿಕ್ ವಾಹನ ಖರೀದಿಗೆ ಕೇಂದ್ರ ಸರ್ಕಾರವು ಉತ್ತೇಜನ ನೀಡುತ್ತಿದೆ. ಈಗಾಗಲೇ ದೆಹಲಿ, ಹರಿಯಾಣ ರಾಜ್ಯ ಸರ್ಕಾರಗಳು ಸಹ ರಿಯಾಯ್ತಿ, ಸಬ್ಸಿಡಿಗಳನ್ನು ಘೋಷಿಸಿವೆ. ಈ ಬೆನ್ನಲ್ಲೇ ದೇಶದ ವಿವಿಧೆಡೆ ಎಲೆಕ್ಟ್ರಿಕ್ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ.
(ಇದನ್ನೂ ಓದಿ: ಸಚಿವರು, ಸಂಸದರ ಹೊಸ ವಾಹನ ಖರೀದಿ ಮೊತ್ತ ಹೆಚ್ಚಿಸಿದ ರಾಜ್ಯ ಸರ್ಕಾರ)