ಬಳ್ಳಾರಿ : ಮುಂಗಾರು ಹಂಗಾಮಿನಲ್ಲಿ ವಾಡಿಕೆಯ ಮಳೆ ಸುರಿಯುತ್ತಿದೆಯಾದ್ರೂ ಬಿತ್ತನೆ ಕಾರ್ಯ ಚುರುಕುಗೊಳಿಸಲು ಭೂಮಿ ಹದಮಾಡಿಕೊಳ್ಳುವ ಕಾರ್ಯ ಜೋರಾಗಿ ಸಾಗಿದೆ.
ಕೃಷಿ ಭೂಮಿಯ ಕಸ- ಕಡ್ಡಿಯನ್ನ ಕಿತ್ತೆಸೆದು ಹಸನು ಮಾಡೋದರಲ್ಲೇ ಮದ್ಯಪ್ರಿಯರು ತಮ್ಮ ದೈನಂದಿನ ಪಾರ್ಟಿ ಆಯೋಜಿಸುತ್ತಿದ್ದಾರೆ. ಇಳಿ ಸಂಜೆಯಾದ್ರೆ ಸಾಕು ಹದಮಾಡಿದ ಭೂಮಿಯಲ್ಲೇ ಮದ್ಯಪ್ರಿಯರ ದಂಡು ಮದ್ಯಸೇವನೆ ಮಾಡುತ್ತಾರೆ. ಮದ್ಯ ಸೇವನೆ ಮಾಡೋದಲ್ಲದೇ ಮದ್ಯದ ಬಾಟಲ್ ಸೇರಿ ಇನ್ನಿತರೆ ತ್ಯಾಜ್ಯಗಳನ್ನು ಅಲ್ಲಿಯೇ ಎಸೆದು ಹೋಗುತ್ತಿದ್ದಾರೆ. ಇದಲ್ಲದೆ ಪಾನಮತ್ತಿನಲ್ಲಿದ್ದ ಪಾನಪ್ರಿಯರು ಮದ್ಯದ ಬಾಟಲಿಗಳನ್ನ ಒಡೆದು ಸ್ವಚ್ಛ ಜಮೀನನ್ನು ಹಾಳು ಮಾಡುತ್ತಿದ್ದಾರೆ. ಹೀಗಾಗಿ ದಿನನಿತ್ಯ ಈ ಮದ್ಯದ ಬಾಟಲಿ ಗಾಜುಗಳನ್ನ ಎತ್ತಿ ಹಾಕುವುದರಲ್ಲೇ ಜಿಲ್ಲೆಯ ರೈತರು ಹೈರಾಣಾಗುತ್ತಿದ್ದಾರೆ.
ನಗರದ ಹೊರವಲಯದ ಮೋಕಾ ರಸ್ತೆ, ಸಿರಗುಪ್ಪ ರಸ್ತೆ, ಕಪ್ಪಗಲ್ ರಸ್ತೆ, ತಾಳೂರು ರಸ್ತೆಗಳಲ್ಲಿನ ಹದಮಾಡಿದ ಜಮೀನನಲ್ಲೇ ಈ ಕುಡುಕರ ಅಡ್ಡೆಗಳು ಶುರುವಾಗಿವೆ. ಲಾಕ್ಡೌನ್ ವೇಳೆ ಬಾರ್ ಅಂಡ್ ರೆಸ್ಟೋರೆಂಟ್ಗಳು ಇಲ್ಲದ ಕಾರಣ ರೈತರ ಜಮೀನುಗಳಲ್ಲಿ ಪಾರ್ಟಿ ಮಾಡುವುದನ್ನ ಪಾನಪ್ರಿಯರು ರೂಢಿ ಮಾಡಿಕೊಂಡಿದ್ದಾರೆ. ಈಗ ರೈತರ ಪಾಲಿಗೆ ಖಳನಾಯಕರಾಗಿದ್ದಾರೆ.