ಬಳ್ಳಾರಿ: ಕೋವಿಡ್ ವಿಚಾರದಲ್ಲಿ ವಿಪಕ್ಷಗಳು ಅನಗತ್ಯ ಆರೋಪ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕಾರ್ಯಕ್ಕೆ ಮುಂದಾಗಿವೆ. ಇಲ್ಲಸಲ್ಲದ ಆರೋಪ ಮಾಡಿ ಅನಗತ್ಯ ರಾಜಕಾರಣ ಮಾಡೋದನ್ನು ಕೈಬಿಡಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಮನವಿ ಮಾಡಿಕೊಂಡಿದ್ದಾರೆ.
ಬಳ್ಳಾರಿಯ ತಮ್ಮ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿಯಂತ್ರಣದ ಸಲುವಾಗಿ ಯಾವ ಯಾವ ಉಪಕರಣ ಖರೀದಿ ಮಾಡಲಾಗಿದೆ ಎಂದು ಈಗಾಗಲೇ ವಿಪಕ್ಷ ನಾಯಕರಿಗೆ ದಾಖಲೆ ಸಮೇತ ಮಾಹಿತಿ ನೀಡಿದ್ದೇವೆ. ಆದ್ರೂ ಕೂಡ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ದೇಶದ ಎಲ್ಲಾ ರಾಜ್ಯಗಳಲ್ಲಿನ ವಿಪಕ್ಷಗಳು ಸರ್ಕಾರಕ್ಕೆ ಸಹಕಾರ ನೀಡುತ್ತಿವೆ. ಕರ್ನಾಟಕದಲ್ಲಿ ಮಾತ್ರ ವಿಪಕ್ಷಗಳು ಅನಗತ್ಯ ಆರೋಪ ಮಾಡುತ್ತಿವೆ. ಸದನದಲ್ಲೂ ಲೆಕ್ಕ ಕೊಡಲು ನಾವು ಸಿದ್ಧರಿದ್ದೇವೆ. ಹೀಗಾಗಿ ಜನರಲ್ಲಿ ಅನಗತ್ಯ ಗೊಂದಲ ಸೃಷ್ಟಿ ಮಾಡೋದು ಬೇಡ ಎಂದರು.
ತೆಲಂಗಾಣದಲ್ಲಿ ಬ್ಯಾನ್ ಮಾಡಿದ ಕಂಪನಿಯಿಂದ ಸ್ಯಾನಿಟೈಸರ್ ಖರೀದಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾವ ಕಂಪನಿಗಳಿಂದ ಉಪಕರಣ ಖರೀದಿ ಮಾಡಲಾಗಿದೆ ಅನ್ನೋದರ ಬಗ್ಗೆ ಲೆಕ್ಕ ನೀಡಲಾಗಿದೆ ಎಂದರು.
ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನನಗೆ ಯಾವುದೇ ರೀತಿಯ ಅಸಮಾಧಾನ ಕೂಡ ಇಲ್ಲ. ನಾವೆಲ್ಲಾ ಸಚಿವರು ಒಂದೇ ಕುಟುಂಬದ ಸದಸ್ಯರಂತೆ ಇದ್ದೇವೆ. ನನ್ನ ಇಲಾಖೆಯಲ್ಲಿ ಬೇರೆ ಸಚಿವರ ಅಥವಾ ಅಧಿಕಾರಿಗಳ ಹಸ್ತಕ್ಷೇಪ ಇಲ್ಲ. ನಾನು ಸಮರ್ಥನಾಗಿದ್ದೇನೆ. ನನಗೆ ಎರಡು ಬಾರಿ ಆರೋಗ್ಯ ಸಚಿವನಾಗಿರುವ ಅನುಭವ ಇದೆ. ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ಸಚಿವರು ಕೆಲಸ ಮಾಡುತ್ತಿದ್ದೇವೆ. ಈ ಶ್ರೀರಾಮುಲುರನ್ನು ಸೈಡ್ಲೈನ್ ಮಾಡಲು ಸಾಧ್ಯವಿಲ್ಲ. ಅದನ್ನು ಊಹೆ ಮಾಡಲು ಸಹ ಆಗೋದಿಲ್ಲ ಎಂದರು.
ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ವಿಚಾರ ಕುರಿತು ಸಿಎಂ ಬಿಎಸ್ವೈ ಜೊತೆಗೆ ಚರ್ಚಿಸಲಾಗುವುದು. ಅವರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಭರವಸೆ ನನಗಿದೆ ಎಂದರು.