ವಿಜಯನಗರ : ಪುರಾಣ ಕಾಲದಿಂದಲೂ ಮಳೆಬಾರದ ಸಂದರ್ಭದಲ್ಲಿ ಕತ್ತೆಗಳ ಮದುವೆ ಮಾಡಿ ಮಳೆಗಾಗಿ ಪ್ರಾರ್ಥಿಸುವ ಪದ್ದತಿ ನಡೆದುಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಹರಪನಹಳ್ಳಿ ಪಟ್ಟಣದಲ್ಲಿ ನಿನ್ನೆ(ಸೋಮವಾರ) ಕತ್ತೆಗಳ ಮದುವೆ ಮಾಡಿದರು. ಮದುವೆ ಮಾಡಿದ ಬೆನ್ನಲ್ಲೇ ತುಂತುರು ಮಳೆಯಾಗಿದ್ದು, ಜನರ ಸಂಭ್ರಮಕ್ಕೆ ಕಾರಣವಾಯಿತು.
ಮಳೆಗೆ ಪ್ರಾರ್ಥಿಸಿ ಪಟ್ಟಣದ ಕೋಣನಕೇರಿ ನಿವಾಸಿಗಳು ಜಾತಿಬೇಧ ಮರೆತು ಹಿಂದೂ ಸಂಪ್ರದಾಯದಂತೆ ವಾಸುದೇವರ (ಕತ್ತೆಗಳ) ಮದುವೆ ಮಾಡಿದ್ದಾರೆ. ಹೆಣ್ಣು ಕತ್ತೆಗೆ ಸೀರೆ, ಗಂಡು ಕತ್ತೆಗೆ ಪಂಚೆ ತೊಡಿಸಿ, ಮೈಗೆ ಅರಿಶಿಣ, ಕುಂಕುಮ ಲೇಪಿಸಿ, ಹೂವು ಮಾಲೆಗಳಿಂದ ಅಲಂಕರಿಸಿ, ತೆರೆದ ಟ್ರ್ಯಾಕ್ಟರ್ನಲ್ಲಿ ಕತ್ತೆಗಳನ್ನು ನಿಲ್ಲಿಸಿದರು. ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.
ಪುರೋಹಿತರ ಮಂತ್ರಪಠಣ, ಮಂತ್ರಾಕ್ಷತೆ, ತಮಟೆ ಬಾರಿಸಿ ತಾಳಿಕಟ್ಟಿ ಶಾಸ್ರೋಕ್ತವಾಗಿ ಮದುವೆ ಮಾಡಿದರು. ಕೋಣನಕೇರಿ ಬಡಾವಣೆಯ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಐತಿಹಾಸಿಕ ಕೋಟೆ ಆಂಜನೇಯ ದೇವಸ್ಥಾನ, ಮೇಗಳಪೇಟೆ ರಸ್ತೆ ಸೇರಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಇದಾದ ಕೆಲವೇ ನಿಮಿಷಗಳಲ್ಲಿ ತುಂತುರು ಮಳೆಯಾಯಿತು. ಮಳೆ ಬಂದಿದ್ದಕ್ಕೆ ಹರಕೆ ಫಲಿಸಿತು ಎಂದು ಸ್ಥಳೀಯರು ಸಂಭ್ರಮಿಸಿದರು.
ಇದನ್ನೂ ಓದಿ: ನಾಯಿಯೊಂದಿಗೆ ಮಗುವಿಗೆ ಮದುವೆ: ಮೌಢ್ಯ ಮೆರೆದ ಬುಡಕಟ್ಟು ಜನ!