ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿಂದಿಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಬೈಲೂರು ಗ್ರಾಮದ 13 ಮಂದಿ ಸದಸ್ಯರನ್ನು ಬಿಕರಿ ಅಸ್ತ್ರ ಪ್ರಯೋಗಿಸುವ ಮೂಲಕ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ಸದಸ್ಯರ ಬಿಕರಿ ಅಸ್ತ್ರವೇ ಸಿಂದಿಗೇರಿ ಗ್ರಾಮ ಪಂಚಾಯತ್ಗೆ ಕಗ್ಗಂಟಾಗಿದೆ.
ಸಿಂದಿಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 26 ಸ್ಥಾನಗಳಿದ್ದು, ಆ ಪೈಕಿ ಬೈಲೂರು ಗ್ರಾಮದ 13 ಮಂದಿ ಸದಸ್ಯರನ್ನು ಈಗಾಗಲೇ ಅವಿರೋಧ ಆಯ್ಕೆಯ ಮೂಲಕ ಅಲ್ಲಿನ ಮುಖಂಡರು ಸದಸ್ಯತ್ವವನ್ನು ಗ್ರಾಮದ ದೇವತೆ ಮಾರಿಕಾಂಬ ಹೆಸರಿನಡಿ ಬಿಕರಿಗೊಳಿಸಿದ್ದಾರೆ. ಇನ್ನುಳಿದ ಸಿಂದಿಗೇರಿ ಗ್ರಾಮದ 13 ಸ್ಥಾನಗಳಿಗೆ ಈಗಾಗಲೇ 29 ನಾಮಪತ್ರಗಳು ಸಲ್ಲಿಕೆಯಾಗಿವೆ.
ಆದರೆ ಮತದಾನದ ಚಿಹ್ನೆ ಮಾತ್ರ ನೀಡಿರುವ ಚುನಾವಣಾ ಆಯೋಗವು ಈವರೆಗೂ ಕ್ರಮ ಸಂಖ್ಯೆಯನ್ನು ನೀಡಿಲ್ಲ. ಹೀಗಾಗಿ ಅಭ್ಯರ್ಥಿಗಳಲ್ಲಿ ಆತಂಕ ಮನೆಮಾಡಿದ್ದು, ಕೂಡಲೇ ಕ್ರಮ ಸಂಖ್ಯೆ ನೀಡಬೇಕೆಂದು ಗ್ರಾಮದ ಮುಖಂಡರು, ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಸಿಂದಿಗೇರಿ ಗ್ರಾಮದ ನಿವಾಸಿ ಶ್ರೀನಿವಾಸ ಅವರು, ನಮಗೆ ಈ ಕೂಡಲೇ ಕ್ರಮ ಸಂಖ್ಯೆ ನೀಡಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದೆ ಭಾರಿ ಪರಿಣಾಮವನ್ನು ಎದುರಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಪಕ್ಕದ ಊರಿನಲ್ಲಿ ಬಿಕರಿ ಮಾಡಿದ್ರೆ ನಮಗೇಕೆ ಈ ಶಿಕ್ಷೆ ನೀಡುತ್ತಿದ್ದೀರಾ, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದರೂ ಕೂಡ ಯಾಕೆ ನೀವು ಕ್ರಮ ಸಂಖ್ಯೆ ನೀಡುತ್ತಿಲ್ಲ. ಇಂದು ಸಂಜೆಯೊಳಗೆ ಕ್ರಮ ಸಂಖ್ಯೆ ನೀಡಿ, ಶಾಂತಿಯುತ ಮತದಾನಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಉಮೇಶ ಗೌಡ ಒತ್ತಾಯಿಸಿದರು.