ಬಳ್ಳಾರಿ: ಅನ್ಲಾಕ್ 3.0 ನಂತರವೂ ಜಿಲ್ಲಾದ್ಯಂತ ಹೋಲ್ಸೇಲ್ ಹಾಗೂ ರಿಟೇಲ್ (ಚಿಲ್ಲರೆ) ವ್ಯಾಪಾರ ಹೇಳಿಕೊಳ್ಳುವಂಥ ಚೇತರಿಕೆ ಕಂಡಿಲ್ಲ. ಅಂದಾಜು ಶೇ 50ರಷ್ಟು ಪ್ರಮಾಣದಲ್ಲಿ ಬಟ್ಟೆ ವ್ಯಾಪಾರ ಕುಸಿತ ಕಂಡಿದ್ದು, ಅಂಗಡಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಾಲೀಕರು ತಮ್ಮ ಕಿಸೆಯಿಂದ ವೇತನ ಪಾವತಿಸುವಂಥ ಪರಿಸ್ಥಿತಿ ಎದುರಾಗಿದೆ.
ಗಣಿನಾಡು ಜಿಲ್ಲೆ ಜೀನ್ಸ್ ಉದ್ಯಮಕ್ಕೆ ಪ್ರಸಿದ್ಧಿ. ಅದೆಷ್ಟೋ ದೊಡ್ಡ ದೊಡ್ಡ ಕಂಪನಿಗಳು, ಬಟ್ಟೆ ಅಂಗಡಿಗಳು ತಲೆ ಎತ್ತಿವೆ. ಆದರೆ, ಈಗ ಗ್ರಾಹಕರಿಲ್ಲದೇ ಅವು ಬಿಕೋ ಎನ್ನುತ್ತಿವೆ. ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಸರ್ ಕಡ್ಡಾಯ ಮಾಡುವಂತಹ ವ್ಯವಸ್ಥೆ ಮಾಡಿದ್ದರೂ ಅಂಗಡಿಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಗ್ರಾಹಕರು ಬರುತ್ತಿಲ್ಲ. ಆಗೊಮ್ಮೆ-ಈಗೊಮ್ಮೆ ಗ್ರಾಹಕರು ಅಂಗಡಿಗಳತ್ತ ಮುಖ ಮಾಡುತ್ತಿದ್ದಾರೆ.
ಅಂಗಡಿ ಮಾಲೀಕರ ಮಾತು
ಅಧ್ವಾನಗೊಂಡ ಮಾರುಕಟ್ಟೆ ವ್ಯವಸ್ಥೆ: ಈ ಸಂಬಂಧ ಈಟಿವಿ ಭಾರತದೊಂದಿಗೆ ನಂದೀಶ ಗಾರ್ಮೆಂಟ್ ಮಾಲೀಕ ಯರಿಸ್ವಾಮಿ ಮಾತನಾಡಿ, ಗ್ರಾಹಕರು ಬಟ್ಟೆ ಖರೀದಿಯಿಂದ ಹಿಂದೆ ಸರಿಯುತ್ತಿದ್ದಾರೆ. ಆನ್ಲೈನ್ ಮಾರುಕಟ್ಟೆ ಹಾವಳಿ ಹೆಚ್ಚಾಗಿದೆ. ಅತ್ಯಂತ ಕಡಿಮೆ ದರದ ಬಟ್ಟೆಗಳನ್ನು ಜಾಸ್ತಿ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿಯೇ ಮಾರುಕಟ್ಟೆ ವ್ಯವಸ್ಥೆ ಅಧ್ವಾನಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆನ್ಲೈನ್ ಬಲೆಗೆ ಗ್ರಾಹಕರು: ಮಾಧುರಿ ಸಿಲ್ಕ್ನ ಮಾಲೀಕ ವಿನಯ ಜೈನ್ ಮಾತನಾಡಿ, ಶೇ 50ರಷ್ಟು ವ್ಯಾಪಾರ ವಹಿವಾಟು ನಿಂತಿದೆ. ಅಂಗಡಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸಂಬಳ ಕೊಡಲಾಗುತ್ತಿಲ್ಲ. ಗುಣಮಟ್ಟದ ಬಟ್ಟೆಗಳನ್ನು ಕೈಬಿಟ್ಟು ಆನ್ಲೈನ್ನಂತಹ ಮೋಸದ ಜಾಲದ ಬಲೆಗೆ ಗ್ರಾಹಕರು ಬೀಳುತ್ತಿದ್ದಾರೆ. ಹೀಗಾಗಿ, ಬಟ್ಟೆ ವ್ಯಾಪಾರವೇ ಸಾಕಪ್ಪ ಎಂದೆನಿಸಿದೆ ಎಂದರು.