ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜಿಲ್ಲಾ ಹೋರಾಟ ಸಮಿತಿ ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿಗೆ ಜೆಡಿಎಸ್ - ಕಾಂಗ್ರೆಸ್ ಮುಖಂಡರು ಬೆಂಬಲ ಸೂಚಿಸಿದ್ದಾರೆ.
ನಗರದ ಮೀನಾಕ್ಷಿ ವೃತ್ತದಲ್ಲಿರುವ ಜೆಡಿಎಸ್ ಕಚೇರಿಯಿಂದ ಜೆಡಿಎಸ್ ಹಿರಿಯ ಮುಖಂಡ ಮೀನಳ್ಳಿ ಡಿ. ತಾಯಣ್ಣ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಮತ್ತು ಸಿಎಂ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಬಳಿಕ ಮಾತನಾಡಿದ ಮೀನಳ್ಳಿ ತಾಯಣ್ಣ, ಬಳ್ಳಾರಿ ಜಿಲ್ಲೆಯ ವಿಭಜನೆಗೆ ಯಾರೊಬ್ಬರೂ ಒಪ್ಪಲ್ಲ. ಸಚಿವ ಆನಂದ್ ಸಿಂಗ್ ತಮ್ಮ ಸ್ವಾರ್ಥಕ್ಕಾಗಿ ಈ ಕಾರ್ಯಕ್ಕೆ ಕೈ ಹಾಕಿರೋದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಹರಿಹಾಯ್ದರು.
ನಂತರ ಬಳ್ಳಾರಿ ಜಿಪಂ ಸದಸ್ಯ ಎ.ಮಾನಯ್ಯ ಮಾತನಾಡಿ, ಜಿಲ್ಲೆಯ ವಿಭಜನೆಗೆ ಪರ-ವಿರೋಧ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಲು ಇನ್ನೂ ಒಂದು ತಿಂಗಳ ಕಾಲಾವಕಾಶವನ್ನು ಕಲ್ಪಿಸಲಾಗಿದೆ. ಹೀಗಾಗಿ ಈ ಹೋರಾಟ ಕೇವಲ ಐದಾರು ದಿನಕ್ಕೆ ಸೀಮಿತ ಆಗಲ್ಲ. ಇದು ನಿರಂತರವಾಗಿ ಮುಂದುವರೆಯುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸರ್ಕಾರದ ಅಧಿಸೂಚನೆ ವಿರುದ್ಧ ಆಕ್ಷೇಪಣಾ ಪತ್ರ ಚಳವಳಿ
ವಿಜಯನಗರ ಜಿಲ್ಲೆ ಘೋಷಣೆಗೆ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯ ವಿರುದ್ಧ ಆಕ್ಷೇಪಣೆಗಳನ್ನು ಅಂಚೆ ಪತ್ರದ ಮೂಲಕ ಸಲ್ಲಿಸುವ ಪತ್ರ ಚಳುವಳಿಗೆ ನಾಳೆಯಿಂದಲೇ ಸಾಂಕೇತಿಕವಾಗಿ ಚಾಲನೆ ನೀಡಲು ಸಂಘಟನೆಗಳು ನಿರ್ಧರಿಸಿವೆ. ಇದರ ಜೊತೆಗೆ ಕಾನೂನಾತ್ಮಕ ಹೋರಾಟ ಕೂಡ ಮತ್ತೊಂದೆಡೆ ಸದ್ದಿಲ್ಲದೆ ಸಾಗುತ್ತಿದೆ.
ಜನವರಿ 14ರವರೆಗೂ ಕೂಡ ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿಸಿ ಹಂತ ಹಂತದ ಹೋರಾಟಕ್ಕೆ ನಾಂದಿ ಹಾಡೋ ಮುಖೇನ ರಾಜ್ಯ ಸರ್ಕಾರವನ್ನು ಬಡಿದೆಬ್ಬಿಸುವ ಕಾರ್ಯವು ನಿತ್ಯ ನಿರಂತರವಾಗಿ ನಡೆಯುತ್ತಲೇ ಇದೆ.
ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದುರ್ಗ ಜಿಪಂ ಸದಸ್ಯ ಮುಂಡರಗಿ ನಾಗರಾಜ, ನಾಳೆಯಿಂದಲೇ ಅಂಚೆ ಪತ್ರದ ಮೂಲಕ ನೂತನ ಜಿಲ್ಲೆ ಘೋಷಣೆಗೆ ಆಕ್ಷೇಪಣಾ ಪತ್ರಗಳನ್ನು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರಿಗೆ ಮುಟ್ಟಿಸುವ ಕಾರ್ಯ ಮಾಡಲಾಗುವುದು ಎಂದರು.