ಬಳ್ಳಾರಿ: ವೈದ್ಯರೂ ಮನುಷ್ಯರೇ ಎಂಬುದನ್ನು ನಾಗರಿಕರು ಅರಿಯಬೇಕು. ಜೀವನದ ಎಲ್ಲ ನೋವು, ನಲಿವುಗಳನ್ನು ಅವರೂ ಅನುಭವಿಸುತ್ತಾರೆ. ಅದರಲ್ಲಿ ಮಹಿಳಾ ವೈದ್ಯರು ಕುಟುಂಬದ ಜೊತೆಗೆ ವೃತ್ತಿ ಜೀವನ ನಿರ್ವಹಿಸುವುದು ಅದ್ಭುತ ಕೆಲಸ ಎಂದು ಅದಮ್ಯ ಚೇತನ ಸಂಸ್ಥೆಯ ನಿರ್ದೇಶಕಿ ತೇಜಶ್ವಿನಿ ಅನಂತಕುಮಾರ್ ಅಭಿಪ್ರಾಯಪಟ್ಟರು.
ಭಾರತೀಯ ವೈದ್ಯಕೀಯ ಸಂಘ ಮತ್ತು ಮಹಿಳಾ ವೈದ್ಯರ ವಿಭಾಗದ ಸಹಯೋಗದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಮಹಿಳಾ ವೈದ್ಯರ ಸಮ್ಮೇಳನ ‘ಅದ್ವಿತಿ'-2019ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಎಷ್ಟೇ ದೊಡ್ಡ ವ್ಯಕ್ತಿಯನ್ನು ಪ್ರಭಾವಿಸುವ ಶಕ್ತಿ ವೈದ್ಯರಲ್ಲಿದೆ ಎಂದರು.
ತಂತ್ರಜ್ಞಾನವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಕಸವನ್ನು ಮರುಬಳಕೆ ಮಾಡಿಕೊಳ್ಳುವ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು. ಭಾರತೀಯ ವಿಚಾರ ಮತ್ತು ತತ್ವಗಳು ಇಂದಿಗೂ ನಮ್ಮಲ್ಲಿವೆ. ಕೇವಲ ಸೀರೆ ಮತ್ತು ಕುಂಕುಮ ಇಟ್ಟುಕೊಂಡರೆ ಸಂಸ್ಕೃತಿಯನ್ನು ಗೌರವಿಸಿದಂತಲ್ಲ. ಅದು ನಮ್ಮ ನಡವಳಿಕೆಯಲ್ಲೂ ಕಾಣಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯದ ವಿವಿಧ ಜಿಲ್ಲೆಗಳ ಮಹಿಳಾ ವೈದ್ಯರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಮಹಿಳಾ ವೈದ್ಯರ ಸಂಘಟನೆ ಬಲಪಡಿಸುವುದು, ವೃತ್ತಿಯ ಸಮಸ್ಯೆಗಳಿಗೆ ಪರಿಹಾರ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಯಿತು. ಸಮತೋಲನದ ಜೀವನ, ಡಿಜಿಟಲ್ ಯುಗದಲ್ಲಿ ಮಕ್ಕಳ ಪಾಲನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿವಿಧ ಕ್ಷೇತ್ರಗಳ ಸಾಧಕರು ಉಪನ್ಯಾಸ ನೀಡಿದರು.