ಬಳ್ಳಾರಿ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದ ಕುಡಿಯುವ ನೀರಿನ ಟ್ಯಾಂಕ್ಗೆ ಯಾರೋ ಕಿಡಿಗೇಡಿಗಳು ವಿಷದ ಗುಳಿಗೆಗಳುಳ್ಳ ಬಾಟಲಿಯನ್ನು ಬಿಸಾಡಿದ್ದು, ನೀರಗಂಟಿ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.
ಚಿಗಟೇರಿ ಗ್ರಾಮದ ಶಿವನಯ್ಯನ ಕೆರೆಗೆ ಹೋಗುವ ಮಾರ್ಗದಲ್ಲಿರುವ ನೀರು ತುಂಬಿದ ಸಂಪಿಗೆ (ನೆಲ ಮಹಡಿ ಟ್ಯಾಂಕ್) ಗುರುವಾರ ತಡರಾತ್ರಿ ಯಾರೋ ಕಿಡಿಗೇಡಿಗಳು ಮೆಕ್ಕೆಜೋಳಕ್ಕೆ ಹೊಡೆಯುವ ವಿಷದ ಗುಳಿಗೆಗಳುಳ್ಳ ಬಾಟಲಿಯನ್ನು ಬಿಸಾಡಿದ್ದಾರೆ. ಇಂದು ಬೆಳಗ್ಗೆ ಗ್ರಾಮಸ್ಥರಿಗೆ ನೀರನ್ನು ಪೂರೈಸಿದಾಗ ವಾಸನೆ ಬಂದಿದ್ದು, ಇದನ್ನು ಸೂಕ್ಷ್ಮವಾಗಿ ಗಮನಿಸಿದ ನೀರಗಂಟಿ ಸಿದ್ದೇಶ ಅವರು ಗ್ರಾಮಸ್ಥರಿಗೆ ಆ ನೀರನ್ನು ಕುಡಿಯಬೇಡಿ ಎಂದು ತಿಳಿಸಿದ್ದಾರೆ.
ಬಳಿಕ, ಗ್ರಾಮದಲ್ಲಿ ಡಂಗೂರ ಸಾರಿಸುವ ಮುಖೇನ ಈ ದಿನ ಪೂರೈಕೆಯಾದ ನೀರು ವಾಸನೆಯಿಂದ ಕೂಡಿದೆ. ಯಾರು ಕುಡಿಯಬೇಡಿ, ಹೊರಹಾಕಿ ಎಂದಾಗ ಗ್ರಾಮಸ್ಥರೆಲ್ಲರೂ ಸಂಗ್ರಹಿಸಿದ ನೀರನ್ನು ಚೆಲ್ಲಿದ್ದಾರೆ. ಅಕಸ್ಮಾತ್ ಜನರು ಆ ನೀರನ್ನು ಕುಡಿದಿದ್ದರೆ ದೊಡ್ಡ ದುರಂತವೇ ಸಂಭವಿಸುತ್ತಿತ್ತು.
ವಿಷಯ ತಿಳಿಯುತ್ತಿದ್ದಂತೆ ತಾ.ಪಂ ಇಒ ಈಶ್ವರ ಪ್ರಸಾದ್, ಡಿವೈಎಸ್ಪಿ ಹಾಲಮೂರ್ತಿರಾವ್, ಕುಡಿಯುವ ನೀರು ನೈರ್ಮಲ್ಯ ಎಇಇ ಸಿದ್ದರಾಜು, ಜೆಇ ಗಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿಗಟೇರಿ ಗ್ರಾಮದಲ್ಲಿ ನಡೆದಿರುವ ಈ ಘಟನೆ ಅಹಿತಕರ, ಯಾವುದೇ ಅನಾಹುತ ಸಂಭವಿಸದಿರುವುದು ಸಮಾಧಾನ ತಂದಿದೆ. ಈ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಿ ಎಂದು ಡಿವೈಎಸ್ಪಿಯವರಿಗೆ ಈಗಾಗಲೇ ಸೂಚನೆ ನೀಡಿರುವೆ ಎಂದು ಹರಪನಹಳ್ಳಿ ಶಾಸಕ ಗಾಲಿ ಕರುಣಾಕರರೆಡ್ಡಿ ಸೂಚಿಸಿದ್ದಾರೆ.
ಜೊತೆಗೆ ಆರೋಪಿಗಳ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕೆಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಕ್ಕೀರಪ್ಪನವರು ಚಿಗಟೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.