ಬಳ್ಳಾರಿ: ಭಯೋತ್ಪಾದನೆ ಹೊಡೆದೋಡಿಸಲು ಜಾಗತಿಕ ಮಟ್ಟದಲ್ಲಿ ಎಲ್ಲಾ ದೇಶಗಳು ಒಂದಾಗಬೇಕು ಎಂದು ಗಣಿನಾಡಿನ ಚಿತ್ರ ಕಲಾವಿದ ಎಂ.ಡಿ ರಫೀಕ್ ಒತ್ತಾಯಿಸಿದ್ದಾರೆ.
ನಗರದ ರೇಡಿಯೋ ಪಾರ್ಕ್ನಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ದ್ವೀಪ ರಾಷ್ಟ್ರದಲ್ಲಿ ಮಾನವೀಯತೆಯ ಕಗ್ಗೊಲೆಯಾಗಿದೆ. ಭಯೋತ್ಪಾದನೆ ಯಾವುದೇ ಒಂದು ಧರ್ಮ ಇಲ್ಲ. ಅವರೆಲ್ಲ ರಾಕ್ಷಸರಾಗಿದ್ದು, ಇಂತಹ ಹೀನ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಪ್ರತಿನಿತ್ಯ ಮಾನವೀಯತೆಯ ಮೇಲೆ ಉಗ್ರರು ನಡೆಸುತ್ತಿರುವ ದೌರ್ಜನ್ಯ, ದಬ್ಬಾಳಿಕೆಗಳನ್ನು ಯಾವುದೇ ಧರ್ಮದ ಮುಖಂಡರು ಪ್ರೋತ್ಸಾಹಿಸಬಾರದು ಎಂದರು.
ವಿಶ್ವದಲ್ಲಿ ಶಾಂತಿ, ನೆಮ್ಮದಿಯನ್ನು ನಿರ್ಮಾಣ ಮಾಡಬೇಕಾಗಿದೆ. ಆದ್ದರಿಂದ ನಾವು ಜಾಗತಿಕ ಮಟ್ಟದಲ್ಲಿ ಎಲ್ಲರೂ ಒಟ್ಟುಗೂಡಬೇಕು, ಮಾನವೀಯತೆಯ ಮೇಲೆ ನಡೆಯುವ ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತು ಹಾಕಬೇಕು. ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದ ಉಗ್ರರಿಗೆ ಧಿಕ್ಕಾರ ಕೂಗುವ ಮೂಲಕ ಚಿತ್ರ ಕಲಾವಿದ ರಫೀಕ್ ಆಕ್ರೋಶ ಹೊರಹಾಕಿದರು.