ವಿಜಯನಗರ: ಕೂಡ್ಲಿಗಿ ತಾಲೂಕಿನ ಕ್ಯಾಸನಕೆರೆ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ವಾಂತಿ ಮತ್ತು ಭೇದಿ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಮಂಗಳವಾರ ಗ್ರಾಮದ ಬಿಂದು (5) ಎಂಬ ಬಾಲಕಿ ಸಂಶಯಾಸ್ಪದವಾಗಿ ಮೃತಪಟ್ಟಿದ್ದಾಳೆ. ಅಲ್ಲದೇ, ಹೊಸಪೇಟೆಯಲ್ಲಿ ಒಬ್ಬರು ಸೇರಿದಂತೆ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ 10 ಜನ ದಾಖಲಾಗಿದ್ದಾರೆ.
ಗ್ರಾಮದಲ್ಲಿ ವಾಂತಿ, ಭೇದಿ ಪ್ರಕರಣಗಳು ಹೆಚ್ಚಾಗಿರುವ ಮತ್ತು ಬಾಲಕಿ ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ. ಇಂದು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕುಡಿಯುವ ನೀರಿನಲ್ಲಿ ಕಲುಷಿತ ನೀರು ಸೇವಿಸಿದ್ದರಿಂದ ಜನರಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ನಂತರ ಡಿಸಿ ಅನಿರುದ್ಧ್ ಗ್ರಾಮದಲ್ಲಿ ಸಂಚರಿಸಿ ಕುಡಿಯುವ ನೀರು ಸರಬರಾಜು ಆಗುವ ಪೈಪ್ ಲೈನ್, ಓವರ್ ಹೆಡ್ ಟ್ಯಾಂಕ್ ಹಾಗೂ ಮಿನಿ ಟ್ಯಾಂಕ್ಗಳನ್ನು ವೀಕ್ಷಿಸಿದರು. ಇಲ್ಲಿ ಸರಬರಾಜು ಆಗುವ ನೀರನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಗ್ರಾಮದಲ್ಲಿ ಮತ್ತೊಮ್ಮೆ ಸ್ವಚ್ಛತೆ ಕೈಗೊಳ್ಳುವಂತೆ ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.
ಅಲ್ಲಿಂದ ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಅವರು ವಾಂತಿ, ಭೇದಿಯಿಂದ ದಾಖಲಾಗಿದ್ದ ರೋಗಿಗಳ ಆರೋಗ್ಯವನ್ನು ವಿಚಾರಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು. ತಹಶೀಲ್ದಾರ್ ಟಿ.ಜಗದೀಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ರವಿಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರದೀಪ್, ಸಿಡಿಪಿಒ ನಾಗನಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಇದ್ದರು.
ಇದನ್ನೂ ಓದಿ: ರಸ್ತೆ ದಾಟುವ ಆತುರ, ಬಳ್ಳಾರಿಯಲ್ಲಿ ಓರ್ವ ಸಾವು, ಇಬ್ಬರು ವಿದ್ಯಾರ್ಥಿಗಳು ಗಂಭೀರ