ಚಿಕ್ಕೋಡಿ(ಬೆಳಗಾವಿ) : ನಾಳೆ ರಾಜ್ಯಾದ್ಯಂತ ಎಲ್ಲಾ ದೇವಸ್ಥಾನಗಳು ದರ್ಶನಕ್ಕೆ ಮುಕ್ತವಾಗಲಿವೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಸುಕ್ಷೇತ್ರ ಯಡೂರಿನ ಶ್ರೀ ವೀರಭದ್ರೇಶ್ವರ ಹಾಗೂ ಆಂಧ್ರದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಗಳು ತೆರೆಯಲಿವೆ ಎಂದು ಯಡೂರ ಮಠದ ಶ್ರೀಶೈಲ ಜದ್ಗುರು ತಿಳಿಸಿದ್ದಾರೆ.
ಯಡೂರ ಮಠದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ನಾಳೆಯಿಂದ ರಾಜ್ಯಾದ್ಯಂತ ಎಲ್ಲಾ ದೇವಸ್ಥಾನಗಳು ಪ್ರಾರಂಭವಾಗಲಿವೆ. ಭಕ್ತರಿಗೆ ದರ್ಶನ ಭಾಗ್ಯ ಸಿಗಲಿದೆ. ಸುಮಾರು 80 ದಿನಗಳ ನಂತರ ದೇವಸ್ಥಾನಗಳು ಪ್ರಾರಂಭವಾಗಲಿವೆ. ದೇವಸ್ಥಾನಗಳಲ್ಲಿ ಪೂಜೆ, ಅಭಿಷೇಕ ಸೇರಿ ಕೆಲ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದಿಲ್ಲ. ಕೇವಲ ಅಂತರದ ದರ್ಶನಕ್ಕೆ ಮಾತ್ರ ಅವಕಾಶವಿದೆ.
ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಸಾಮಾಜಿಕ ಅಂತರ ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. 10 ವರ್ಷದ ಒಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ವಯೋವೃದ್ಧರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಕೊರೊನಾ ನಿಯಂತ್ರಣಕ್ಕಾಗಿ ಭಕ್ತರು ತಮ್ಮ ಸುರಕ್ಷತೆಯ ಅನುಗುಣವಾಗಿ ದೇವರ ದರ್ಶನ ಪಡೆದುಕೊಳ್ಳಬೇಕು ಎಂದರು.