ಬೆಳಗಾವಿ: ಇಲ್ಲಿನ ಪತ್ರಕರ್ತರು, ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳ ಮುಖಂಡರುಗಳನ್ನು ಒಳಗೊಂಡ 'ಬೆಳಗಾವಿ ಮೀಡಿಯಾ ಜಂಕ್ಷನ್' ಎಂಬ ವಾಟ್ಸ್ಯಾಪ್ ಗ್ರೂಪ್, ಅಂತಾರಾಜ್ಯದ ಮಹಿಳೆವೋರ್ವಳು ಮರಳಿ ತನ್ನ ಮನೆ ಸೇರುವಂತೆ ಮಾಡಿದೆ.
ಜು. 28 ರಂದು ಆಂಧ್ರಪ್ರದೇಶದ ತಿರುಪತಿ ಸಮೀಪದ ಜಯರಾಮಪುರ ಗ್ರಾಮದ ಮಹಿಳೆ ಸತತ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ ಬೆಳಗಾವಿ ನಗರದ ಚೆನ್ನಮ್ಮ ವೃತ್ತದ ಬಳಿ ಇರುವ ಬಸ್ ತಂಗುದಾಣದಲ್ಲಿ ಕುಳಿತಿದ್ದಳು. ಈ ಕುರಿತು ರಾತ್ರಿ ಸುಮಾರಿಗೆ ವಾಟ್ಸ್ಯಾಪ್ ಗ್ರೂಪ್ನಲ್ಲಿ ಫೋಟೊಗಳನ್ನು ಹಾಕಿ, ಈ ಬಗ್ಗೆ ಚರ್ಚೆ ನಡೆಸಲಾಗಿತ್ತು.
ಈ ವೇಳೆ ಬೆಳಗಾವಿ ಮೀಡಿಯಾ ಜಂಕ್ಷನ್ ಗ್ರೂಪ್ನಲ್ಲಿದ್ದ ಜಿ.ಪಂ. ಸಿಇಒ ಡಾ. ರಾಜೇಂದ್ರ. ಕೆ. ವಿ ಇದನ್ನು ಗಮನಿಸಿ, ತಕ್ಷಣ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ (ಪ್ರಭಾರ) ರಾಮನಗೌಡ ಕನ್ನೋಳ್ಳಿ ಅವರಿಗೆ ಫೋನ್ ಮಾಡಿದ್ದರು. ತಕ್ಷಣ ಮಹಿಳೆಯನ್ನು ರಕ್ಷಣೆ ಮಾಡಿ, ನಿರ್ಗತಿಕರ ಕೇಂದ್ರಕ್ಕೆ ದಾಖಲಿಸುವಂತೆ ಸೂಚಿಸಿದ್ದರು.
ಜಿ.ಪಂ. ಸಿಇಒ ಅವರ ಸೂಚನೆಯಂತೆ ಕಾರ್ಯಪ್ರವೃತ್ತರಾಗಿದ್ದ ಅಧಿಕಾರಿಗಳು, ಕೇವಲ 20 ನಿಮಿಷಗಳಲ್ಲಿ ಮಹಿಳೆ ಇರುವ ಸ್ಥಳಕ್ಕೆ ದೌಡಾಯಿಸಿ, ರಕ್ಷಿಸಿದ್ದರು. ನಂತರ ಆರೋಗ್ಯ ತಪಾಸಣೆ ಮಾಡಿದ ಅಧಿಕಾರಿಗಳು ಮಹಿಳೆ ಮಾನಸಿಕವಾಗಿ ಸದೃಢವಾಗಿದ್ದು, ಸರಿಯಾಗಿ ಆಹಾರ ಸೇವಿಸದೇ ಅಶಕ್ತವಾಗಿ ಬಿದ್ದು ಕೈಗೆ ಗಾಯವಾಗಿದ್ದನ್ನು ಗಮನಿಸಿ ಚಿಕಿತ್ಸೆ ನೀಡಿದ್ದರು. ನಂತರ ಮಹಿಳೆಯನ್ನು ತಾತ್ಕಾಲಿಕವಾಗಿ ಇಲ್ಲಿನ ಶಾಹು ನಗರದಲ್ಲಿರುವ ಮಲ್ಲಿಕಾರ್ಜುನ ವೃದ್ಧಾಶ್ರಮಕ್ಕೆ ದಾಖಲಿಸಿ, ವಿಚಾರಿಸಿದ್ದರು. ಈ ವೇಳೆ ಮಹಿಳೆ ತಾನು ಆಂಧ್ರಪ್ರದೇಶದ ಜಯರಾಮಪುರ ಗ್ರಾಮದವಳಾಗಿದ್ದು, ತನ್ನ ಬಳಿ ಹಣ ಇಲ್ಲದಿರುವುದರಿಂದ ಅಲೆಯುತ್ತಿರುವ ಬಗ್ಗೆ ಹಾಗೂ ಸ್ವಗ್ರಾಮಕ್ಕೆ ತೆರಳಲು ಹಣದ ವ್ಯವಸ್ಥೆ ಮಾಡಿದಲ್ಲಿ ಮರಳಿ ತಮ್ಮೂರಿಗೆ ಹೋಗುವುದಾಗಿ ತಿಳಿಸಿದ್ದಳು. ಇದರಿಂದ ಅಧಿಕಾರಿಗಳು ಮಹಿಳೆ ಗುಣಮುಖವಾದ ನಂತರ ರೈಲು ಟಿಕೆಟ್ ಪಡೆದು, ಮಹಿಳೆಯ ಸ್ವಗ್ರಾಮವಾದ ಜಯರಾಮಪುರಕ್ಕೆ ಕಳಿಸಲು ವ್ಯವಸ್ಥೆ ಮಾಡಿದ್ದಾರೆ.
ನಿರ್ಗತಿಕ ಮಹಿಳೆಯನ್ನು ಗುರುತಿಸಿ ಮಾನವೀಯ ನೆಲೆಗಟ್ಟಿನಲ್ಲಿ ತ್ವರಿತವಾಗಿ ಸ್ಪಂದಿಸಿರುವ ಅಧಿಕಾರಿಗಳು ಮತ್ತು ಮಹಿಳೆಯನ್ನು ಮರಳಿ ಗೂಡಿಗೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಬೆಳಗಾವಿ ಮಿಡಿಯಾ ಜಂಕ್ಷನ್ ಎಂಬ ಹೆಸರಿನ ವಾಟ್ಸಾಪ್ ಗ್ರೂಪ್ ಸದಸ್ಯರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.