ಚಿಕ್ಕೋಡಿ: ಮಹಾರಾಷ್ಟ್ರದ ರಾಜಾಪುರ ಜಲಾಶಯದಿಂದ ಬಿಟ್ಟಿರುವ ನೀರು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮೊಳವಾಡ, ಕುಸನಾಳ ಗ್ರಾಮಗಳಿಗೆ ಹರಿದು, ಉಗಾರ ಬ್ಯಾರೇಜ್ ತಲುಪಿದಾಗ ಜನತೆಯ ಸಂತಸಕ್ಕೆ ಪಾರವೇ ಇರಲಿಲ್ಲ.
ನೀರು ಹರಿದು ಬಂದದ್ದನ್ನು ನೋಡಲು, ನೂರಾರು ಜನರು ಬ್ಯಾರೇಜ್ ಬಳಿ ಸೇರಿದ್ದರು. ನೀರು ನೋಡಿ ಎಷ್ಟೋ ದಿನಗಳಾದವೆಂಬ ಭಾವನೆ ಅವರಲ್ಲಿತ್ತು. ಅಥಣಿ ತಾಲೂಕಿನ ಉಗಾರ ಬಿ.ಕೆ ಮತ್ತು ಉಗಾರ ಕೆ.ಹೆಚ್ ಗ್ರಾಮದ ಜನತೆಗೆ ನೀರು ಸಿಕ್ಕಂತಾಗಿದ್ದು, ಇಂದು ರಾತ್ರಿ ರಾಯಬಾಗ ತಾಲೂಕಿನ ಕುಡಚಿಯನ್ನು ತಲುಪಲಿದೆ.
ಕೃಷ್ಣಾ ನದಿಯ ಬಲಭಾಗಕ್ಕೆ ರಾಯಬಾಗ ಹಾಗೂ ಎಡಭಾಗಕ್ಕೆ ಅಥಣಿ ತಾಲೂಕಿನ ಹಳ್ಳಿಗಳಿದ್ದು, ರಾಜಾಪುರ ಜಲಾಶಯದಿಂದ ಮತ್ತಷ್ಟು ನೀರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಹೆಚ್ಚಿನ ನೀರು ಬಿಟ್ಟಲ್ಲಿ ಅಥಣಿ ಮತ್ತು ರಾಯಬಾಗ ತಾಲೂಕುಗಳ ಅನೇಕ ಗ್ರಾಮಗಳಿಗೆ ಒಂದೆರಡು ದಿನಗಳಲ್ಲಿ ನೀರು ತಲುಪಲಿದೆ.
ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನಾ ನೀರು ಬಿಡುಗಡೆ ಮಾಡಿಸಲು ರಾಜ್ಯ ಸರ್ಕಾರ ನಡೆಸಿದ ಎಲ್ಲ ಪ್ರಯತ್ನಗಳೂ ವಿಫಲವಾಗಿವೆ. ಆದರೆ, ಮಹಾರಾಷ್ಟ್ರದ ಶಿರೋಳ ಶಾಸಕರ ಪ್ರಯತ್ನದಿಂದಾಗಿ ಈ ಹಿಂದೆ ರಾಜಾಪುರ ಡ್ಯಾಂನಿಂದ ನೀರು ಬಿಡುಗಡೆಯಾಗಿತ್ತು. ಇತ್ತೀಚೆಗೆ ಈ ಶಾಸಕರನ್ನು ಅಥಣಿ ತಾಲೂಕಿನ ಶಿರಗುಪ್ಪಿಯಲ್ಲಿ ಕನ್ನಡ ಮತ್ತು ಮರಾಠಿ ಜನರು ಒಟ್ಟಾಗಿ ಸನ್ಮಾನಿಸಿದ್ದರು.
ಕಳೆದ ಎರಡು ತಿಂಗಳಿಂದ ಚಿಕ್ಕೋಡಿ, ಅಥಣಿ ಮತ್ತು ರಾಯಬಾಗ ತಾಲೂಕುಗಳ ಜನರು ನೀರಿನ ಅಭಾವದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಇದೀಗ ಸ್ವಲ್ಪ ಮಟ್ಟಿಗೆ ಸಂತಸ ವ್ಯಕ್ತಪಡಿಸಿದ್ದಾರೆ.