ಚಿಕ್ಕೋಡಿ : ಮಹಾರಾಷ್ಟ್ರದ ರಾಜಾಪೂರ ಡ್ಯಾಂನಿಂದ ಕೃಷ್ಣಾನದಿಗೆ ಭಾರಿ ಪ್ರಮಾಣದ ನೀರು ಹರಿದು ಬಂದಿದ್ದು, ಕಳೆದ ನಾಲ್ಕು ತಿಂಗಳಿಂದ ನೀರಿಲ್ಲದೆ ಕಂಗಾಲಾಗಿದ್ದ ರೈತರ ಮೊಗದಲ್ಲಿ ಸಂತಸ ಮೂಡಿದೆ.
ಚಿಕ್ಕೋಡಿ ತಾಲೂಕಿನ ನದಿತೀರದ ಗ್ರಾಮಗಳಾದ ಯಡೂರ, ಮಾಂಜರಿ, ಚಂದೂರ, ಅಂಕಲಿ, ಇಂಗಳಿ, ಕಲ್ಲೋಳ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಕೃಷ್ಣಾನದಿಗೆ ಬೃಹತ್ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಲವು ದಿನಗಳಿಂದ ನೀರಿಲ್ಲದೆ ಬಾಯಿ ಬಡಿದುಕೊಳ್ಳುತ್ತಿದ್ದ ಜನತೆ ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನು ಕಾಗವಾಡ ತಾಲೂಕಿನ ಇಂಗಳಿ ಗ್ರಾಮದವರೆಗೂ ನೀರು ಬಂದಿದ್ದು, ಹೀಗೆ ನೀರು ಬರುತ್ತಿದ್ದರೆ ರಾಯಬಾಗ, ಅಥಣಿ ತಾಲೂಕಿನವರೆಗೂ ಹೋಗಿ ತಲುಪುವ ಸಾಧ್ಯತೆಗಳಿವೆ. ಆದ್ರೆ ಬೇಸರದ ಸಂಗತಿ ಎಂದರೆ ಇನ್ನೂ ಸಹ ಮಹಾರಾಷ್ಟ್ರ ಸರ್ಕಾರದ ಜೊತೆ ಕರ್ನಾಟಕ ಸರ್ಕಾರ ನೀರಿನ ಒಡಂಬಡಿಕೆಯನ್ನು ಮಾಡಿಕೊಳ್ಳದೆ ಇರುವುದು ಗಡಿಭಾಗದ ಜನತೆಗೆ ನಿರಾಸೆಯನ್ನು ಮೂಡಿಸಿದೆ.