ಬೆಳಗಾವಿ: ಗೋಕಾಕ್ ನಗರಸಭೆಯ ಭ್ರಷ್ಟಾಚಾರದ ಕರ್ಮಕಾಂಡ ಒಳಗೊಂಡ ಮತ್ತೊಂದು ವಿಡಿಯೋವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ದಿನಗಳಿಂದ ನಾವೂ ಬ್ಯೂಸಿ ಇದ್ದೇವೆ. ಗೋಕಾಕ್ ನಗರಸಭೆಯ ಭ್ರಷ್ಟಾಚಾರದ ಕುರಿತು ಇನ್ನೊಂದು ವಿಡಿಯೋ ರೆಡಿ ಆಗುತ್ತಿದ್ದು, ಶೀಘ್ರವೇ ಬಿಡುಗಡೆ ಮಾಡಲಾಗುವುದು. ಗೋಕಾಕ್ ತಾಲೂಕು ಪಂಚಾಯತಿಯ 23 ಜನ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟಿರುವುದರಲ್ಲಿ ಅಚ್ಚರಿ ಏನಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ನಾವೇ ಅವರಿಗೆ ಒಂದು ವಾರದ ಹಿಂದೆ ನೋಟಿಸ್ ನೀಡಿದ್ದೇವೆ. ರಾಜೀನಾಮೆಯನ್ನ ಪಕ್ಷದ ಜಿಲ್ಲಾಧ್ಯಕ್ಷರಿಗೆ ನೀಡಬೇಕು. ಅಧಿಕಾರಿಗೆ ಕೊಡುವ ಅವಶ್ಯಕತೆ ಏನಿತ್ತು? ಪಕ್ಷದ ವ್ಯವಹಾರ ಪಕ್ಷದಲ್ಲಿರಬೇಕು ಎಂದರು.
ಇನ್ನು ಗೋಕಾಕ್ನಲ್ಲಿ ಕಾಂಗ್ರೆಸ್ ಖಾಲಿ ಮಾಡಿಸುವ ಪ್ರಶ್ನೆಯೇ ಇಲ್ಲ. ಸದಸ್ಯರು ರಿಸೈನ್ ಮಾಡಬಹುದು, ಜನರನ್ನು ಖಾಲಿ ಮಾಡಿಸಲು ಆಗುವುದಿಲ್ಲ. ಸದಸ್ಯರು ರಮೇಶ್ ಹಿಡಿತದಲ್ಲಿದ್ದಾರೆ. ಅವರ ಬಗ್ಗೆ ತಲೆಕೆಡಸಿಕೊಳ್ಳುವುದಿಲ್ಲ. ಅಳಿಯ, ಮಾವನ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತೇವೆ. ಜನ ಯಾವ ರೀತಿ ಆಶೀರ್ವಾದ ಮಾಡುತ್ತಾರೆ ಕಾದು ನೋಡಬೇಕಿದೆ. ರಮೇಶ್ ಕಳೆದುಕೊಂಡ ವಸ್ತು ಇನ್ನೂ ಸಿಕ್ಕಿಲ್ಲ, ಸಿಕ್ಕಾಗ ಬಹಿರಂಗ ಪಡಿಸುವೆ ಎಂದರು.