ಬೆಳಗಾವಿ : ರಾಜ್ಯದ ಕೀರ್ತಿ ಪತಾಕೆ ಹಾರಿಸಲು ಕುಂದಾನಗರಿಯ ಮೂವರು ಫುಟ್ಬಾಲ್ ಆಟಗಾರ್ತಿಯರು ರೆಡಿಯಾಗಿದ್ದಾರೆ. ಜಿಲ್ಲೆಯ ಮೂವರು ವಿದ್ಯಾರ್ಥಿನಿಯರು ಭಾರತದ ಮಹಿಳಾ ಪುಟ್ಬಾಲ್ ತಂಡಕ್ಕೆ ಆಯ್ಕೆ ಆಗಿದ್ದಾರೆ.
ಬೆಳಗಾವಿಯ ಕೆಎಲ್ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಬಿಎ ನಾಲ್ಕನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅದಿತಿ ಪ್ರತಾಪ್ ಜಾಧವ್, ಬಿಕಾಂ 6ನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಅಂಜಲಿ ಹಿಂಡಲಗೇಕರ ಹಾಗೂ ಉಜಿರೆಯ ಎಸ್ಡಿಎಂ ಕಾಲೇಜಿನಲ್ಲಿ ಬಿಕಾಂ 6ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಬೆಳಗಾವಿಯ ಪ್ರಿಯಂಕಾ ಕಂಗ್ರಾಳ್ಕರ್ ಭಾರತೀಯ ಫುಟ್ಬಾಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ನಾಳೆ ಉಕ್ರೇನ್‌ಗೆ ಪ್ರಯಾಣ:
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಇಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇಡೀ ತಂಡ ನಾಳೆ ದೆಹಲಿಯಿಂದ ಉಕ್ರೇನ್‌ಗೆ ತೆರಳಲಿದೆ. ಭಾರತೀಯ ತಂಡಕ್ಕೆ ಆಯ್ಕೆಯಾದ 11 ಜನರು ಜುಲೈ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ 8 ದಿನಗಳ ಕಾಲ ವಿಶೇಷ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ಅಂಜಲಿ, ಅದಿತಿ ಮತ್ತು ಪ್ರಿಯಾಂಕಾ ಬೆಳಗಾವಿ ಯುನೈಟೆಡ್ ಫುಟ್ಬಾಲ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಾರೆ. ಮತಿನ್ ಇನಾಮದಾರ್ ಇವರ ಕೋಚ್.
ಸೂಪರ್ ಡಿವಿಜನ್ ಲೀಗ್ನಲ್ಲಿ ಬೊಂಬಾಟ್ ಪ್ರದರ್ಶನ:
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸೂಪರ್ ಡಿವಿಜನ್ ಲೀಗ್ ಪಂದ್ಯಗಳಲ್ಲಿ ಈ ಆಟಗಾರ್ತಿಯರು ಭಾಗವಹಿಸಿ ಉತ್ತಮ ಪ್ರದರ್ಶನ ತೋರಿದ್ದರು. ಹೀಗಾಗಿ, ರಾಷ್ಟ್ರೀಯ ತಂಡಕ್ಕೆ ಈ ಎಲ್ಲರನ್ನೂ ಆಯ್ಕೆ ಮಾಡಲಾಗಿದೆ.
ಪ್ರಿಯಾಂಕಾ ತಂದೆ ಕಾರು ಚಾಲಕ..ಪುತ್ರಿಯ ಸಾಧನೆಗೆ ಇವರೇ ಪ್ರೇರಕ:
ಭಾರತದ ಫುಟ್ಬಾಲ್ ತಂಡದಲ್ಲಿ ಸ್ಥಾನ ಪಡೆದಿರುವ ಪ್ರಿಯಾಂಕಾ ಸಾಮಾನ್ಯ ಕುಟುಂಬದಿಂದ ಬಂದವರು. ಇವರ ತಂದೆ ಕಾರು ಚಾಲಕ. ಆದರೆ, ಪುತ್ರಿಯ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಕುರಿತು ಮಾತನಾಡಿದ ಪ್ರಿಯಾಂಕಾ, ನಾನು ಭಾರತೀಯ ತಂಡದಲ್ಲಿ ಸ್ಥಾನ ಪಡೆದಿರುವುದು ಖುಷಿ ತಂದಿದೆ. ತಂಡದಲ್ಲಿ ಆಡಲು ಉತ್ಸುಕಳಾಗಿದ್ದೇನೆ. ಕುಟುಂಬ ಸದಸ್ಯರು ಹಾಗೂ ಕೋಚ್‌ಗೆ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.
ಭಾರತ ತಂಡಕ್ಕೆ ಆಯ್ಕೆ ಆಗಿರುವ ಮೂವರು ಭರವಸೆಯ ಆಟಗಾರರೇ ಎಂದು ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಮರಾವ್ ಹೇಳಿದ್ದಾರೆ. ಕೆಎಲ್ಇ ಸಂಸ್ಥೆ ಕೂಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಮೂವರು ಭಾರತ ತಂಡಕ್ಕೆ ಆಯ್ಕೆ ಆಗಿರುವುದು ಬೆಳಗಾವಿಗೆ ಹೆಮ್ಮೆ. ಫುಟ್ಬಾಲ್ ರಾಷ್ಟ್ರೀಯ ತಂಡದಲ್ಲಿ ಬೆಳಗಾವಿಗರು ಸ್ಥಾನ ಪಡೆದಿರುವುದು ಇದೇ ಮೊದಲು. ಮಿನಿ ವಿಶ್ವಕಪ್ ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ನನಗಿದೆ ಎಂದ್ದಾರೆ. ತಂಡವನ್ನು ಗೆಲ್ಲಿಸುವ ಮೂಲಕ ಕುಂದಾನಗರಿ ಈ ಕುವರಿಯರು ಮತ್ತಷ್ಟು ಸಾಧನೆ ಮಾಡಲಿ ಎಂಬುದು ಎಲ್ಲರ ಆಶಯವಾಗಿದೆ.