ಬೆಳಗಾವಿ: ಜಿಲ್ಲೆಯಲ್ಲಿ ಈವರೆಗೆ ಶಂಕಿತ 70 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 43 ಜನರಲ್ಲಿ ಬ್ಲ್ಯಾಕ್ ಫಂಗಸ್ ಇರುವುದು ದೃಢಪಟ್ಟಿದೆ. ಈ ಸೋಂಕಿಗೆ ಇಬ್ಬರು ಮೃತಪಟ್ಟಿದ್ದಾರೆ ಎಂದು ಡಿಸಿಎಂ ಗೋವಿಂದ್ ಕಾರಜೋಳ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯ 45 ರಿಂದ 60 ವರ್ಷದೊಳಗಿನ ಜನರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತಿದ್ದು, ಇದಾದ್ಮೇಲೆ ಲಸಿಕೆ ಲಭ್ಯತೆ ಆಧಾರದಲ್ಲಿ 18 ವರ್ಷದವರಿಗೆ ಲಸಿಕೆ ಪ್ರಾರಂಭಿಸಲಾಗುತ್ತಿದೆ. ಇದಲ್ಲದೇ ಈ ವರ್ಷ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚಳವಾಗಿವೆ ಎಂದರು.
ಲಾಕ್‌ಡೌನ್ ಅವಧಿ ಜೂನ್ 7ರವರೆಗೂ ಇದೆ.ಆ ನಂತರ ಲಾಕ್‌ಡೌನ್ ಮುಂದುವರಿಸಬೇಕೋ ಬೇಡವೋ ಎಂಬುದನ್ನು ಮುಖ್ಯಮಂತ್ರಿ ನಿರ್ಧರಿಸಲಿದ್ದಾರೆ. ಮಕ್ಕಳ ಮೇಲೆ ಮೂರನೇ ಅಲೆ ಪ್ರಭಾವ ಬೀರಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಇದಕ್ಕಾಗಿ ಪೂರ್ವಭಾವಿಯಾಗಿ ತಯಾರಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪ್ಲೇಯಿಂಗ್ ಮಿನಿಸ್ಟರ್ ಎಂಬ ಟೀಕೆಗೆ ನಾನು ಉತ್ತರಿಸೋದಿಲ್ಲ. ನಾನು ಕೆಲಸ ಮಾಡುತ್ತಿದ್ದೇನೆ ಅಷ್ಟೇ ಎಂದರು.
ಶಾಸಕ ಅಭಯ ಪಾಟೀಲ ಜೊತೆಗೆ ವಾಗ್ವಾದ ಆಗಿರುವ ವಿಚಾರಕ್ಕೆ, ಬೆಳಗಾವಿಯಲ್ಲಿ ನೇಕಾರರ ಸಂಕಷ್ಟದ ಬಗ್ಗೆ ಶಾಸಕ ಅಭಯ ಪಾಟೀಲ ಧ್ವನಿ ಎತ್ತಿರುವುದು ನಿಜ. ನೇಕಾರರ ಸಮಸ್ಯೆಯನ್ನು ತೆಗೆದುಕೊಂಡು ಅವರು ನನ್ನ ಬಳಿ ಬಂದಿದ್ದರು. ಶಾಸಕರಾದ ಅಭಯ ಪಾಟೀಲ, ಮಹಾದೇವಪ್ಪ ಯಾದವಾಡ ಸೇರಿ ಜಿಲ್ಲೆಯ ಪ್ರತಿನಿಧಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನೇಕಾರರ ಸಮಸ್ಯೆಗಳ ಬಗ್ಗೆ ನಿವೇದಿಸಿದ್ದೇವೆ. ಮುಖ್ಯಮಂತ್ರಿಗಳು ಕೂಡ ನೇಕಾರರಿಗೆ 2 ಸಾವಿರ ರೂಗಳ ಪ್ಯಾಕೇಜ್ ನೆರವು ನೀಡಿ ಕ್ರಮ ಕೈಗೊಂಡಿದ್ದಾರೆ. ನೇಕಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿದೆ ಎಂದು ಹೇಳಿದರು.