ಚಿಕ್ಕೋಡಿ: ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಕಳೆದ 2 ದಿನಗಳಲ್ಲಿ 13 ಮನೆಗಳ ಬೀಗ ಮುರಿದು ಸರಣಿ ಕಳ್ಳತನವಾದ ಬಗ್ಗೆ ವರದಿಯಾಗಿದೆ.
ಐನಾಪುರ ಗ್ರಾಮದಲ್ಲಿ 13 ಮನೆಗಳ ಬೀಗ ಮುರಿದಿರುವ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ, ಬೆಳ್ಳಿ, ನಗದು ಹಣ, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಸರಣಿ ಕಳ್ಳತನದಿಂದಾಗಿ ಸ್ಥಳೀಯರು ಭಯಭೀತಗೊಂಡಿದ್ದಾರೆ.
ಕಾಗವಾಡ ಪಟ್ಟಣದ ಐನಾಪೂರ ಗ್ರಾಮದ ಸಿದ್ದು ದಶರಥ ಜಾಧವ್ ಎಂಬುವವರ ಮನೆಯಲ್ಲಿ 7 ಗ್ರಾಂ ಚಿನ್ನಾಭರಣ, 10 ಗ್ರಾಂ ಬೆಳ್ಳಿಯ ಆಭರಣ ಮತ್ತು 20 ಸಾವಿರ ನಗದು ಎಗರಿಸಿದ್ದಾರೆ.
ಬಸಪ್ಪ ಒಡೆಯರ್ ಎಂಬುವವರ ಮನೆಯಲ್ಲಿ 12 ಗ್ರಾಂ ಚಿನ್ನಾಭರಣ, 10 ಗ್ರಾಂ ಬೆಳ್ಳಿಯ ಆಭರಣ ಹಾಗೂ 10 ಸಾವಿರ ನಗದು ಸೇರಿದಂತೆ 13 ಮನೆಗಳ ಬೀಗ ಮುರಿದು ಕಳ್ಳತನ ಮಾಡಲಾಗಿದೆ.
ಕಳ್ಳತನ ಪ್ರಕರಣ ಬೆಳಕಿಗಿಂತ ಬರುತ್ತಿದ್ದಂತೆ ಸ್ಥಳಕ್ಕೆ ಸಿಪಿಐ ಶಂಕರಗೌಡ ಬಸಗೌಡರ, ಪಿಎಸ್‍ಐ ಬಿ.ಎಂ.ರಬಕವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದಲ್ಲದೇ ಬೆಳಗಾವಿಯಿಂದ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.
ಐನಾಪುರ ಪಟ್ಟಣದ ಮುಖ್ಯ ಭಾಗಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.