ಬೆಂಗಳೂರು : ಮೇಕೆದಾಟು ಯೋಜನೆ ಆರಂಭಿಸಲು ಸರ್ಕಾರ ಹಿಂದೇಟು ಹಾಕುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆ ಮೇಕೆದಾಟು ಯೋಜನೆ ಕಾರ್ಯಗತಗೊಳಿಸುವ ಬಗ್ಗೆ ಶಾಸಕ ಶರತ್ ಬಚ್ಚೇಗೌಡ ಪ್ರಸ್ತಾಪ ಮಾಡಿದ ವಿಚಾರಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಈ ವಿಚಾರ ಸೂಕ್ಷ್ಮವಾಗಿದೆ.
ಇಲ್ಲಿ ಮಾತನಾಡುವುದು ಬೇಡ. ನಾನು ಅವರಿಗೆ ಮಾಹಿತಿ ನೀಡುತ್ತೇನೆ ಎಂದರು. ಆಗ, ಶರತ್ ಪ್ರಸ್ತಾಪಕ್ಕೆ ಸಾಥ್ ನೀಡಿದ ಮಾಜಿ ಸಚಿವರಾದ ಕೃಷ್ಣಬೈರೇಗೌಡ, ಡಿ.ಕೆ.ಶಿವಕುಮಾರ್ ಅವರು ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿದರು.
ಸರ್ಕಾರದ ಗಮನ ಸೆಳೆಯಲು ನಾವು ಜನವರಿ 9 ರಿಂದ 19ರವರೆಗೆ ಪಾದಯಾತ್ರೆ ಮಾಡುತ್ತಿದ್ದೇವೆ. ಮೇಕೆದಾಟು ಯೋಜನೆಯಲ್ಲಿ ಸರ್ಕಾರದ ಜೊತೆ ನಾವು ಇದ್ದೇವೆ. ಜಾಗ, ಹಣ, ನೀರು ನಮ್ಮದು ಕೆಲಸ ಆರಂಭ ಮಾಡಿ ಎಂದು ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.
ತಮಿಳುನಾಡು ಕ್ಯಾತೆ ತೆಗೆದಿದೆ : ಇದಕ್ಕೆ ಉತ್ತರ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸರ್ಕಾರದ ಗಮನಕ್ಕೂ ಈ ವಿಚಾರ ತಂದಿದ್ದೇವೆ. ಮೇಕೆದಾಟು ವಿಚಾರ 1996ರಲ್ಲಿ ಆರಂಭವಾಯಿತು. ಐದು ವರ್ಷ ಡಿಪಿಆರ್ ಮಾಡುವುದಕ್ಕೆ ಸಮಯ ತೆಗೆದುಕೊಳ್ಳಲಾಯಿತು. ಗ್ಲೋಬಲ್ ಟೆಂಡರ್ ಅಂದ್ರು, ಬಳಿಕ ಲೋಕಲ್ ಟೆಂಡರ್ ಕೊಟ್ರು.
ಡಿಪಿಆರ್ ಮಾಡುವುದಕ್ಕೆ 25 ಕೋಟಿ ರೂ. ಖರ್ಚು ಆಗಿದೆ. ಕಾವೇರಿ ಮಾನಿಟರಿ ಬೋರ್ಡ್ ಕೂಡ ಮಾಡಿದ್ದೆವು. ಕಾವೇರಿ ಮಾನಿಟರಿ ಬೋರ್ಡ್ ಕೇಳುವಾಗ ನೀರು ಬಿಡುವುದಕ್ಕೆ ನಮಗೆ ತೊಂದರೆ ಆಗುತ್ತದೆ. ನಾವು ಯಾವುದೇ ಯೋಜನೆ ತಂದರೂ ತಮಿಳುನಾಡು ಕ್ಯಾತೆ ತೆಗೆದಿದೆ ಎಂದು ಹೇಳಿದರು.
ಕಾವೇರಿ ಮಾನಿಟರಿ ಬೋರ್ಡ್ ಮುಂದೆ ನೀರು ಹಂಚಿಕೆ ವಿಚಾರ ಚರ್ಚೆಯಲ್ಲಿ ಇದೆ. ಅದು ಮುಂದಿನ ಸಭೆಯಲ್ಲಿ ತೀರ್ಮಾನ ಆಗುತ್ತದೆ. ಪರಿಸರ ಇಲಾಖೆಯಿಂದ ಕ್ಲಿಯರೆನ್ಸ್ ಸಿಕ್ಕ ಬಳಿಕ ನಾವು ಈ ಯೋಜನೆ ಜಾರಿಗೆ ತರುತ್ತೇವೆ ಎಂದು ಸಿಎಂ ಭರವಸೆ ನೀಡಿದರು.
ಕಾಲೆಳೆದ ಸ್ಪೀಕರ್ : ಇಷ್ಟು ಸ್ಪಷ್ಟ ಉತ್ತರ ನೀಡಿದ್ರಿ, ನಿಮ್ಮ ಉತ್ತರ ನೋಡಿದ್ರೆ ಡಿ.ಕೆ. ಶಿವಕುಮಾರ್ ಪಾದಯಾತ್ರೆ ಕೈಬಿಡಬೇಕು ಎಂದು ಸ್ಪೀಕರ್ ಕಾಗೇರಿ ಕಾಲೆಳೆದರು. ಇಲ್ಲ ಅವರು ಪಾದಯಾತ್ರೆ ಮಾಡಲಿ ಎಂದು ಮುಖ್ಯಮಂತ್ರಿಗಳು ಹೇಳಿದರು. ಪಾದಯಾತ್ರೆ ಮಾಡ್ತಾ ಇರೋದು ಮೇಲಿನವರಿಗೆ ಗೊತ್ತಾಗಬೇಕಲ್ಲ ಎಂದರು ಡಿ.ಕೆ.ಶಿವಕುಮಾರ್.
ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಒತ್ತಾಯಿಸಿ ಜ.9 ರಿಂದ 19ರವರೆಗೆ ಪಾದಯಾತ್ರೆ.. ಡಿಕೆಶಿ ಘೋಷಣೆ