ಬೆಳಗಾವಿ : ನಕಲಿ ನಂದಿನಿ ತುಪ್ಪ ತಯಾರಕರ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು. ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ನಂದಿನಿ ತುಪ್ಪವನ್ನು ನಕಲಿಯಾಗಿ ಉತ್ಪಾದನೆ ಮಾಡಿರುವುದು ಪತ್ತೆ ಹಚ್ಚಲಾಗಿದೆ.
ಆ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ರಾಜ್ಯಾದ್ಯಂತ 18 ಹಾಲು ಉತ್ಪಾದಕ ಯೂನಿಯನ್ಗಳು ಇವೆ. ನಿತ್ಯ 100 ಮೆಟ್ರಿಕ್ ಟನ್ ತುಪ್ಪ ಉತ್ಪಾದನೆ ಮಾಡಲಾಗುತ್ತದೆ. ವಾರ್ಷಿಕ ಸುಮಾರು 410 ಟನ್ ತುಪ್ಪವನ್ನು ತಿರುಪತಿಗೆ ಕೊಡುತ್ತಿದ್ದೇವೆ. 25 ಟನ್ ತುಪ್ಪವನ್ನು ಅಯೋಧ್ಯೆಗೆ ಕಳಹಿಸಲಾಗುತ್ತಿದೆ. ಮಿಲಿಟರಿಗೂ ನಂದಿನಿ ತುಪ್ಪ ಕಳುಹಿಸಿಕೊಡುತ್ತಿದ್ದೇವೆ ಎಂದು ವಿವರಿಸಿದರು.
ನಕಲಿ ತುಪ್ಪದ ಬಗ್ಗೆ ಕೆಎಂಎಫ್ ಅಧಿಕಾರಿಗಳಿಗೂ ಜಾಗೃತಿ ಮೂಡಿಸಲು ಸೂಚಿಸಿದ್ದೇವೆ. ನಕಲಿ ತಪ್ಪ ಸಂಬಂಧ ಸಾರ್ವಜನಿಕರೂ ಎಚ್ಚರಿಕೆ ವಹಿಸಬೇಕು. ನಕಲಿ ತುಪ್ಪ ತಯಾರಕರ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಲು ಸೂಚನೆ ನೀಡಲಾಗಿದೆ. ತುಪ್ಪ ಯಾವುದೇ ರೀತಿಯಲ್ಲೂ ಕಲಬೆರಕೆ ಆಗಬಾರದು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಸಿಎಂ ಭಾವನಾತ್ಮಕ ಭಾಷಣದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಿಎಂ ಬೊಮ್ಮಾಯಿ ಅವರದ್ದು ವಿದಾಯದ ಭಾಷಣ ಅಲ್ಲ, ಅವರು ಭಾವನಾತ್ಮಕವಾಗಿ ಭಾಷಣ ಮಾಡಿದ್ದಾರೆ. ಅದನ್ನು ನೀವು ವಿದಾಯ ಭಾಷಣ ಅಂದುಕೊಂಡರೆ ಹೇಗೆ?. ಕ್ಷೇತ್ರದ ಜನರ ಮುಂದೆ ಪ್ರೀತಿಯಿಂದ ಮಾತನಾಡಿದ್ದಾರೆ ಅಷ್ಟೇ ಎಂದರು.