ಬೆಳಗಾವಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಸೋಂಕಿತ ಬಾಲಕ ಕಣ್ಣೀರಿಟ್ಟಿರುವ ಘಟನೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ನಡೆದಿದೆ.
ಜಿಲ್ಲೆಯ ಕಿತ್ತೂರು ತಾಲೂಕಿನ ಕಲಬಾವಿ ಗ್ರಾಮದ ಬಾಲಕನಿಗೆ ಜೂನ್ 20ರಂದು ಕೊರೊನಾ ಸೋಂಕು ತಗುಲಿದೆ. ಲಾಕ್ಡೌನ್ ಮುನ್ನವೇ ಬಾಲಕ ಚೆನ್ನೈನಲ್ಲಿರುವ ಅಕ್ಕನ ಮನೆಗೆ ಹೋಗಿದ್ದ. ಪರೀಕ್ಷೆಗೆಂದು ಮರಳಿ ಬಂದಾಗ ಆತನಲ್ಲಿ ವೈರಸ್ ಇರುವುದು ಗೊತ್ತಾಗಿದೆ.
ಕೋವಿಡ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ವೈದ್ಯಕೀಯ ಸಿಬ್ಬಂದಿಗೆ ದುಂಬಾಲು ಬಿದ್ದಿದ್ದ. ಓದಿನ ಶ್ರಮ ಹಾಳಾಗುತ್ತೆ, ಪರೀಕ್ಷೆಗೆ ಅವಕಾಶ ಕೊಡಿ ಎಂದು ವಿದ್ಯಾರ್ಥಿ ಕಣ್ಣೀರಿಟ್ಟಿದ್ದ. ಪರೀಕ್ಷೆಗೆಂದು ವಿದ್ಯಾರ್ಥಿ ಹಾಲ್ ಟಿಕೆಟ್ ಕೂಡ ಪಡೆದಿದ್ದನು.
ಆಗ ಸೋಂಕಿತ ವಿದ್ಯಾರ್ಥಿ ಜೊತೆಗೆ ಫೋನ್ ಮೂಲಕ ಮಾತನಾಡಿರುವ ಬೆಳಗಾವಿ ಡಿಡಿಪಿಐ ಡಾ.ಎ.ಬಿ.ಪುಂಡಲೀಕ ಅವರು ಧೈರ್ಯ ತುಂಬಿದ್ದಾರೆ. ಪೂರಕ ಪರೀಕ್ಷೆಗೆ ಹೊಸ ವಿದ್ಯಾರ್ಥಿಯಾಗಿ ಪರಿಗಣಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಈ ಬಗ್ಗೆ ವೈದ್ಯಕೀಯ ಸಿಬ್ಬಂದಿಯೊಂದಿಗೂ ಮಾತನಾಡಿದ್ದು ಬಾಲಕ ಮಾನಸಿಕ ಖಿನ್ನತೆಗೆ ಒಳಗಾಗದಂತೆ ನೋಡಿಕೊಳ್ಳುವಂತೆ ಕೋರಿದ್ದಾರೆ.