ಬೆಳಗಾವಿ : ವಿಧಾನ ಪರಿಷತ್ ಫಲಿತಾಂಶ ಹೊರ ಬಿದ್ದಿದೆ. ಸುಮಾರು 14 ಕ್ಷೇತ್ರ ಗೆಲ್ಲುವ ಸನಿಹದಲ್ಲಿದ್ದೇವೆ. ವಿಧಾನ ಪರಿಷತ್ನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗುತ್ತದೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ಕೊಟ್ಟಂತಹ ಉತ್ತಮ ಆಡಳಿತ ಇದು. ಇದೆಲ್ಲವನ್ನು ನೋಡಿ ಜನ ಉತ್ತಮ ಫಲಿತಾಂಶ ನೀಡಿದ್ದಾರೆ. ಸಿದ್ದರಾಮಯ್ಯನವರು ಅಲೆ ಬಂದಿದೆ, ಸುನಾಮಿ ಬಂದಿದೆ ಎನ್ನುತ್ತಿದ್ರು. ಈಗಾಗಲೇ ನಾಲ್ಕೈದು ಸ್ಥಾನ ಮುಂದಿದ್ದೇವೆ.
ಎರಡು ಸ್ಥಾನ ಗೆದ್ದಿದ್ದೇವೆ. ಸುವರ್ಣ ಅಕ್ಷರದಲ್ಲಿ ಬರೆಯೋ ಫಲಿತಾಂಶ ಜನ ಕೊಡ್ತಿದ್ದಾರೆ. 14 ಸ್ಥಾನ ಗೆದ್ದು ರಾಜ್ಯದಲ್ಲಿ ಬಿಜೆಪಿ ಇತಿಹಾಸ ಬರೆಯಲಿದೆ. ಮುಂದಿನ ದಿನಗಳಲ್ಲೂ ಕಾಂಗ್ರೆಸ್ಗೆ ಭವಿಷ್ಯ ಇಲ್ಲ. 2023ರಲ್ಲೂ ಕಾಂಗ್ರೆಸ್ ಅನ್ನು ಜನ ತಿರಸ್ಕಾರ ಮಾಡ್ತಾರೆ ಎಂದರು.
ಈಶ್ವರಪ್ಪ ಹೇಳಿಕೆಗೆ ಶ್ರೀರಾಮುಲು ಪ್ರತಿಕ್ರಿಯೆ : ಪರಿಷತ್ ಅಭ್ಯರ್ಥಿಗಳು ಕೋಟಿ ಕೋಟಿ ಹಣವನ್ನು ಖರ್ಚು ಮಾಡಿದ್ದಾರೆ ಎಂಬ ಸಚಿವ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯದ್ದು ಆ ಸಂಸ್ಕೃತಿಯಲ್ಲ. ಆ ಕಾಲ ಹೋಯ್ತು. ದುಡ್ಡು ಕೊಟ್ಟವರೆಲ್ಲಾ ದೊಡ್ಡ ರಾಜಕಾರಣಿ ಆಗ್ತಾರೆ ಅನ್ನೋ ಕಾಲ ಹೋಯ್ತು. ಹಣದಿಂದ ಗೆಲ್ಲುತ್ತಾರೆ ಅನ್ನೋದು ಆಗಲ್ಲ. ನಮ್ಮ ಸರ್ಕಾರ ಕೊಟ್ಟ ಅಭಿವೃದ್ಧಿ ಕೆಲಸಗಳನ್ನ ಜನ ಮೆಚ್ಚಿದ್ದಾರೆ ಎಂದರು.
ಕೈ ಭವಿಷ್ಯ ಸುಳ್ಳಾಯಿತು : ಕಾಂಗ್ರೆಸ್ಗೆ ಭವಿಷ್ಯವಿಲ್ಲ ಎನ್ನುವುದಕ್ಕೆ ವಿಧಾನ ಪರಿಷತ್ ಚುನಾವಣೆ ಫಲಿತಾಂಶವೇ ಸಾಕ್ಷಿ. 25 ಸ್ಥಾನಗಳಲ್ಲಿ 20ರಲ್ಲಿ ಬಿಜೆಪಿ ಸ್ಪರ್ಧೆ ಮಾಡಿದೆ. ಇದರಲ್ಲಿ 14ರಲ್ಲಿ ಗೆಲ್ಲುತ್ತೇವೆ. ಕಾಂಗ್ರೆಸ್ ನಾಯಕರು ಏನೇ ಟೀಕೆ, ಆರೋಪ ಮಾಡಿದರೂ ಚುನಾವಣೆ ಮೇಲೆ ಪರಿಣಾಮ ಬೀರಿಲ್ಲ. ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರ ಭವಿಷ್ಯ ಚುನಾವಣೆ ಫಲಿತಾಂಶದಿಂದ ಸುಳ್ಳಾಗಿದೆ ಎಂದರು.
ಸಾರಿಗೆ ನೌಕರರಿಗೆ ಸಂಬಳ : ಸಾರಿಗೆ ನೌಕರರ ಸಂಬಳ ಬಾಕಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಾರಿಗೆ ನೌಕರರ ಒಂದು ಸಂಬಳ ಬಾಕಿ ಇದ್ದು, ಶೀಘ್ರವೇ ಪಾವತಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರ್ಥಿಕ ಇಲಾಖೆ ಜೊತೆ ಚರ್ಚಿಸಿದ್ದೇನೆ ಎಂದರು.