ಬೆಳಗಾವಿ: ಒಂದೇ ದಿನ 14 ಕೊರೊನಾ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದ ಪರಿಣಾಮ ಗಡಿ ಜಿಲ್ಲೆ ಬೆಳಗಾವಿ ಬೆಚ್ಚಿಬಿದ್ದಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 69ಕ್ಕೆ ಏರಿಕೆ ಕಂಡಿದೆ.
ಬೆಳಗಾವಿಯ ಹಿರೇಬಾಗೇವಾಡಿ ಗ್ರಾಮದಲ್ಲಿ 12 (5 ಮಹಿಳೆ, 6 ಪುರುಷ) ಹಾಗೂ ಹುಕ್ಕೇರಿಯ ಸಂಕೇಶ್ವರದ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ಹಿರೇಬಾಗೇವಾಡಿ ಗ್ರಾಮವೊಂದರಲ್ಲೇ ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.
ಅಂಗನವಾಡಿ ಶಿಕ್ಷಕಿ ಜೊತೆಗೆ ಸಂಪರ್ಕ ಹೊಂದಿದ್ದ ಹಿರೇಬಾಗೇವಾಡಿಯ ಮೂವರಲ್ಲಿ ಸೋಂಕು ಕಾಣಿಸಿದೆ. ಸಂಕೇಶ್ವರ ಪಟ್ಟಣದಲ್ಲಿ 75 ವರ್ಷದ ವೃದ್ಧೆ ಮತ್ತು ಆಕೆಯ ಮೊಮ್ಮಕ್ಕಳಾದ 9ವರ್ಷದ ಬಾಲಕ ಹಾಗೂ 8 ವರ್ಷದ ಬಾಲಕಿಗೆ ಸೋಂಕು ತಗುಲಿದೆ.
ಈ ಮೂವರು ದೆಹಲಿ ಧರ್ಮಸಭೆಯಲ್ಲಿ ಪಾಲ್ಗೊಂಡು ಸೋಂಕಿಗೆ ಒಳಗಾಗಿದ್ದ ರೋಗಿ-293 ಸಂಪರ್ಕ ಹೊಂದಿದ್ದರು. ಹಿರೇಬಾಗೇವಾಡಿಯಲ್ಲಿ ದಾಖಲಾದ 12 ಪ್ರಕರಣ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದರು. ರಾಜ್ಯದಲ್ಲಿ ಈವರೆಗೂ 557 ಪ್ರಕರಣ ದಾಖಲಾಗಿವೆ.