ಬೆಳಗಾವಿ: ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಕಳ್ಳರ ಹಾಗೆ ಜಾರಿಗೆ ತಂದಿದ್ದಾರೆ. ಹೀಗಾಗಿ, ಸದನದ ಹೊರಗೆ ಮತ್ತು ಒಳಗೂ ಕಾನೂನು ಹೋರಾಟ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದವರು ಸಂವಿಧಾನ ಬಾಹಿರ ಕಾನೂನು ಜಾರಿಗೆ ತರುತ್ತಿದ್ದಾರೆ. ಇವತ್ತಿನವರೆಗೆ ಆಮಿಷ ಹಾಗೂ ಪ್ರಚೋದನೆಗಳಿಗೆ ಮತಾಂತರವಾಗಿದ್ದು ಬಹಳ ಕಡಿಮೆ. ಏನಾದರೂ ಮತಾಂತರವಾಗಿದ್ದರೆ ಜಾತಿ ವ್ಯವಸ್ಥೆ, ಅಸ್ಪೃಶ್ಯತೆಯಿಂದ ಅವಮಾನವಾಗಿ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯಿಂದ ಆಗಿರಬಹುದು ಎಂದು ಅಭಿಪ್ರಾಯಪಟ್ಟರು.
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಿಂದೂ ಧರ್ಮದಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿಲು ಬಹಳ ಪ್ರಯತ್ನ ಮಾಡಿದ್ದರು. ಆದ್ರೆ ಅವರಿಗೆ ಸುಧಾರಣೆ ಮಾಡಲು ಸಾಧ್ಯವಾಗಲಿಲ್ಲ. 1956ರಲ್ಲಿ ಅಕ್ಟೋಬರ್ನಲ್ಲಿ ಮತಾಂತರವಾಗಿರುವ ಕುರಿತು ಅವರು ಭಾಷಣ ಮಾಡಿದ್ರು. ಹಿಂದೆ ಮಹಾರಾಜರು ನಮ್ಮ ವ್ಯವಸ್ಥೆಯನ್ನು ಪ್ರತಿಭಟನೆ ಮಾಡಿ ಜಾತಿ, ಚಾತುರ್ವಣ ವ್ಯವಸ್ಥೆಯಿಂದ ಗೌರವದಿಂದ ಬದುಕಲು ಸಾಧ್ಯವಿಲ್ಲ, ಅವಮಾನ ಸಹಿಸಿಕೊಳ್ಳಲು ಸಾಧ್ಯವಿಲ್ಲ ಅಂದಾಗ ಮಾತ್ರ ಮತಾಂತರ ಆಗಿದ್ದಾರೆ. ಆಮಿಷ, ಹೆದರಿಕೆಗಳಿಗೆ ಮತಾಂತರ ಆಗಿರೋದು ಬಹಳ ಕಡಿಮೆ ಎಂದು ಸಮರ್ಥನೆ ಮಾಡಿಕೊಂಡರು.
ಬಿಜೆಪಿ ಸರ್ಕಾರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ದೇಶದಲ್ಲಿ ಹೆಚ್ಚುತ್ತಿರುವ ಬೆಲೆ ಏರಿಕೆ, ರೈತರ ಸಮಸ್ಯೆ, ಪ್ರವಾಹ, ಬೆಳೆ ಹಾನಿ, ಆರ್ಥಿಕ ಸಂಕಷ್ಟ, ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಕೊರತೆಯನ್ನು ನೀಗಿಸುವ ಸಲುವಾಗಿ ಜನರ ಭಾವನೆಗಳನ್ನ ಬೇರೆಡೆಗೆ ಸೆಳೆಯಲು ಬಿಜೆಪಿ ಸಂವಿಧಾನ ಬಾಹಿರ ಕಾನೂನು ಜಾರಿಗೆ ತರುತ್ತಿದೆ. ಹೀಗಾಗಿ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ರು.