ಬೆಳಗಾವಿ: ರಾಮದೇವ ಗಲ್ಲಿಯಲ್ಲಿ ಒಂದು ಪುರಾತನ ದೇವಾಲಯವಿತ್ತು. ಆ ದೇವಾಲಯವನ್ನು ಕೆಡವಿ ಅದರ ಮೇಲೆ ಶಾಹಿ ಮಸೀದಿ ನಿರ್ಮಾಣ ಮಾಡಿದ್ದಾರೆ. ಅದು ಮರಳಿ ದೇವಾಲಯ ಆಗಬೇಕು ಎಂಬುದು ಎಲ್ಲ ಹಿಂದೂಗಳ ಭಾವನೆಯಾಗಿದೆ ಎಂದು ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ರಾಮದೇವ ಗಲ್ಲಿಯ ಹನುಮಾನ ಮಂದಿರದ ಪಕ್ಕದಲ್ಲಿಯೇ ಗುಡಿ ಇದೆ. ಇದರ ಬಗ್ಗೆ ಪೂರ್ಣವಾಗಿ ಪರಿಶೀಲನೆ ಮಾಡುತ್ತಿದ್ದೇನೆ. ಇನ್ನು ಕೆಲವೊಂದು ಮಾಹಿತಿ ಎರಡ್ಮೂರು ದಿನಗಳಲ್ಲಿ ಸಿಗಲಿದೆ. ಯಾವಾಗ ಅದನ್ನು ಕೆಡವಿ ಮಸೀದಿ ಮಾಡಿದರು?, ಅಲ್ಲಿ ಯಾವ ಗುಡಿ ಇತ್ತು? ಎನ್ನುವುದು ತಿಳಿಯಲಿದೆ ಎಂದರು.
ಅಲ್ಲಿನ ಹಿರಿಯರು ಇದು ಪುರಾತನ ಮಂದಿರ ಎಂಬ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಮಸೀದಿ ನೂರು ವರ್ಷದ ಹಿಂದಿನದು ಇರಬಹುದು ಎಂದಿದ್ದಾರೆ. ಆದರೆ ದೇವಸ್ಥಾನ ಸುಮಾರು ಐನೂರು ವರ್ಷದ ಹಿಂದಿನದು ಇರಬಹುದು. ಒಳಗೆ ಬಹಳಷ್ಟು ಚಿತ್ರಗಳನ್ನು ಕೆತ್ತಿ ತೆಗೆಯುವ ಕೆಲಸ ಆಗಿದೆ. ಮಸೀದಿಯಲ್ಲಿ ಕಲ್ಲಿನ ಬಾಗಿಲುಗಳು, ಒಳಗೆ ದೊಡ್ಡ ಕಂಬಗಳಿವೆ. ಹಲಸಿ ಸೇರಿ ಬೇರೆ ದೇವಸ್ಥಾನಗಳಲ್ಲಿ ಇರುವ ಹಾಗೇ ಮಸೀದಿ ಒಳಗಡೆ ಕಂಬಗಳು ಇದ್ದಂತೆ ಮೇಲ್ನೋಟಕ್ಕೆ ಇಲ್ಲಿಯೂ ಕಾಣಿಸುತ್ತವೆ. ಹಿಂದೂ ಮಂದಿರದಲ್ಲಿ ಇದ್ದ ರೀತಿ ಗರ್ಭಗುಡಿಯೊಳಗೆ ಹೋಗಲು ಸಣ್ಣ ಬಾಗಿಲು ಇದೆ. ಹೀಗಾಗಿ ಜಿಲ್ಲಾಡಳಿತ ತ್ವರಿತವಾಗಿ ಪರಿಶೀಲನೆ ನಡೆಸಿ ಇತಿಹಾಸದಲ್ಲಿ ಆಗಿರುವ ಪ್ರಮಾದವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಶಾಸಕನಾಗಿ ನಾನೇ ಒಳಗೆ ಹೋಗಿ ಪರಿಶೀಲನೆ ಮಾಡುತ್ತಿಲ್ಲ. ನಮ್ಮ ಗಮನಕ್ಕೆ ಬಂದಿರುವುದನ್ನು ತಿಳಿಸಿದ್ದೇನೆ. ಸರ್ವೇ ಮಾಡಿ, ಇಲ್ಲವಾದರೆ ಇದನ್ನು ಜಿಲ್ಲಾಡಳಿತ ಸಾಬೀತು ಮಾಡಬೇಕು. ಮೇಲ್ನೋಟಕ್ಕೆ ನೂರಕ್ಕೆ ನೂರರಷ್ಟು ಇದು ಮಂದಿರದಂತೆ ಕಂಡು ಬಂದಿದೆ. ಸರ್ವೇ ಆದ ನಂತರ ಸತ್ಯಾಂಶ ತಿಳಿಯಲಿದೆ. ಬೆಳಗಾವಿಯಲ್ಲಿ ಅನೇಕ ಪೂಜಾಕೇಂದ್ರಗಳು, ಶ್ರದ್ಧಾ ಕೇಂದ್ರಗಳಿವೆ. ಅವುಗಳನ್ನು ಸರ್ವೇ ಮಾಡಿ ಎಂದು ನಾವು ಹೇಳುತ್ತಿಲ್ಲ. ಅದೇ ರೀತಿ ಜನರು ಇನ್ನೂ ಎರಡು ನನ್ನ ಗಮನಕ್ಕೆ ತಂದಿದ್ದಾರೆ. ಆದರೆ ಸ್ವತಃ ನಾನೇ ಗಮನಿಸಿದ ನಂತರ ಅವುಗಳನ್ನು ನಿಮ್ಮ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಎಂದರು.
ಮಸೀದಿ ಕುರಿತು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ, ವಿಷಯ ತಿಳಿಸುತ್ತೇನೆ. ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಮತ್ತೊಮ್ಮೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ತಿಳಿಸುತ್ತೇವೆ. ಆಗಲೂ ಆಗದಿದ್ದರೆ ಸಮಾಜದ ಎಲ್ಲ ಬಾಂಧವರು, ಪಕ್ಷದ ಪ್ರಮುಖರ ಜೊತೆಗೆ ಚರ್ಚಿಸಿ ಮುಂದೆ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುವುದನ್ನು ನಿರ್ಧರಿಸುತ್ತೇವೆ ಎಂದರು.
ಇದನ್ನೂ ಓದಿ: ಮಳಲಿ ಮಸೀದಿ ನವೀಕರಣದ ವೇಳೆ ದೇಗುಲ ಶೈಲಿ ಪತ್ತೆ; ಅಷ್ಟಮಂಗಲ ಪ್ರಶ್ನೆ ನಡೆಸಲು ವಿಶ್ವ ಹಿಂದೂ ಪರಿಷತ್ ನಿರ್ಧಾರ