ಚಿಕ್ಕೋಡಿ: ಮಹಾರಾಷ್ಟ್ರ ಗಡಿಯಲ್ಲಿರುವ ಕಾಗವಾಡ ತಾಲೂಕಿನಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಈ ಬಾರಿ ಕರ್ನಾಟಕದ ವಿದ್ಯಾರ್ಥಿಗಳ ಜೊತೆಗೆ ಮಹಾರಾಷ್ಟ್ರದ ಏಳು ವಿದ್ಯಾರ್ಥಿಗಳು ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ.
ಕಾಗವಾಡ ತಾಲೂಕಿನಲ್ಲಿ ಒಟ್ಟು 2,166 ವಿದ್ಯಾರ್ಥಿಗಳು ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ ಎಂದು ಕಾಗವಾಡ ಪ್ರಭಾರಿ ಬಿಇಒ ಸಿ.ಎಂ.ಸಾಂಗಲೆ ಹೇಳಿದರು. ಕಾಗವಾಡ ಪಟ್ಟಣದಲ್ಲಿ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ಅವರು, ಜೂ. 25ರಿಂದ ಜು. 4ರವರೆಗೆ ಪರೀಕ್ಷೆ ನಡೆಯಲಿದೆ. ಒಟ್ಟು ಆರು ಪರೀಕ್ಷಾ ಕೇಂದ್ರಗಳಿವೆ. ಕೋವಿಡ್-19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರದ ಜೊತೆಗೆ ಒಂದು ಕೊಠಡಿಯಲ್ಲಿ ಕನಿಷ್ಠ 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಕಂಡು ಬಂದರೆ ಪ್ರತೇಕ ಕೋಠಡಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಮಹಾರಾಷ್ಟ್ರದ ಮಿರಜ್, ಜಯಸಿಂಗಪುರ, ಸಾಂಗಲಿಯಿಂದ ಒಟ್ಟು ಏಳು ವಿದ್ಯಾರ್ಥಿಗಳು ಕರ್ನಾಟಕಕ್ಕೆ ಶಾಲೆಗೆ ಬರುತ್ತಿದ್ದರು. ಆ ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದು, ಎರಡು ಥರ ವ್ಯವಸ್ಥೆ ಮಾಡಲಾಗಿದೆ. ಗಡಿ ಭಾಗದ ಚೆಕ್ ಪೋಸ್ಟ್ನಲ್ಲಿ ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿದರೆ ಅವರನ್ನು ಬಿಡುವ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆ ಮುಗಿಯುವವರೆಗೆ ಅವರಿಗೆ ಹಾಸ್ಟೆಲ್ ವ್ಯವಸ್ಥೆ ಕೂಡಾ ಕಲ್ಪಿಸಲಾಗಿದೆ. ಇದರಿಂದ ಕರ್ನಾಟಕದ ವಿದ್ಯಾರ್ಥಿಗಳು ಭಯ ಪಡುವ ಅಗತ್ಯ ಇಲ್ಲ ಎಂದರು.
ಪ್ರತೀ ಪರೀಕ್ಷಾ ಕೇಂದ್ರಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಮೂಲಕ ಸ್ಯಾನಿಟೈಸರ್ ಸಿಂಪಡಣೆ ಹಾಗೂ ದಾನಿಗಳಿಂದ ಮಕ್ಕಳಿಗಾಗಿ ಮಾಸ್ಕ್ ವ್ಯವಸ್ಥೆ ಮಾಡಲಾಗಿದೆ. ಕಾಗವಾಡ ಶಾಸಕ, ಸಚಿವ ಶ್ರೀಮಂತ ಪಾಟೀಲ ಅವರು ಈಗಾಗಲೇ ಮಕ್ಕಳಿಗಾಗಿ ಮೂರು ಸಾವಿರ ಮಾಸ್ಕ್‌ಗಳನ್ನು ನೀಡಿದ್ದಾರೆ. ಅದರಂತೆ ಪರೀಕ್ಷೆ ತಯಾರಿಗಾಗಿ ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಸಮುದಾಯ ಭವನಗಳಲ್ಲಿ ಸರ್ಕಾರಿ ಗ್ರಾಂಥಾಲಯ, ವಠಾರ ಶಾಲೆ, ತೋಟದ ಶಾಲೆಗಳಲ್ಲಿ 15-20 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.