ಅಥಣಿ: ತಾಲೂಕಿನ ಝುಂಜರವಾಡ ಗ್ರಾಮದ ಎರಡು ದೇವಸ್ಥಾನ ಮತ್ತು ಒಂದು ಕಿರಾಣಿ ಅಂಗಡಿ ಬೀಗ ಮುರಿದು ಅಪಾರ ಪ್ರಮಾಣದ ಚಿನ್ನಾಭರಣ ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ.
ಅಪ್ಪಯ್ಯ ಸ್ವಾಮಿ ದೇವಸ್ಥಾನ, ಬಡಿಗೇರ ಲಕ್ಷ್ಮೀ ದೇವಸ್ಥಾನ ಸೇರಿದಂತೆ ಕಿರಾಣಿ ಅಂಗಡಿಯಲ್ಲಿ ಖದೀಮರು ತಮ್ಮ ಕೈಚಳಕ ತೋರಿಸಿ ಅಂದಾಜು 300 ಗ್ರಾಂ ಗೂ ಅಧಿಕ ಪ್ರಮಾಣದ ಬಂಗಾರ ಹಾಗೂ 200 ಗ್ರಾಂ ಬೆಳ್ಳಿ ಸೇರಿದಂತೆ ನಗದನ್ನು ದೋಚಿಕೊಂಡು ಎಸ್ಕೇಪ್ ಆಗಿದ್ದಾರೆ. ಕಳೆದ ಮಂಗಳವಾರ ರಾತ್ರಿ ಸಹ ಪಕ್ಕದ ಶಿರಹಟ್ಟಿ ಗ್ರಾಮದಲ್ಲಿ ಇದೇ ರೀತಿ ಕಳ್ಳತನ ಮಾಡಲಾಗಿತ್ತು.
ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಅಥಣಿ ಸಿಪಿಐ ಶಂಕರಗೌಡ ಬಸವನಗೌಡರ, ಐಗಳಿ ಪಿಎಸ್ಐ ಶಿವರಾಜ್ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.