ಬೆಳಗಾವಿ: ಗಡಿ ವಿವಾದ ಕುರಿತು ಮಹಾರಾಷ್ಟ್ರ ಸರ್ಕಾರ ಪದೇಪದೇ ಕ್ಯಾತೆ ತೆಗೆಯುತ್ತಿರುವ ಹಿನ್ನೆಲೆ, ಗಡಿಯಲ್ಲಿ ಎಂಇಎಸ್ ಕಿತಾಪತಿ ಬಗ್ಗೆ ಕರ್ನಾಟಕ ಪರ ವಾಸ್ತವಿಕ ಪರಿಸ್ಥಿತಿಯನ್ನು ದೇಶಕ್ಕೆ ತಿಳಿಸಲು ಪುಸ್ತಕವೊಂದನ್ನು ಹೊರತರಬೇಕೆಂದು ಕನ್ನಡಪರ ಹೋರಾಟಗಾರ, ಹಿರಿಯ ಪತ್ರಕರ್ತ ಮೆಹಬೂಬ್ ಮಕಾನದಾರ್ ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮೂಲಕ ಸಿಎಂ ಯಡಿಯೂರಪ್ಪಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಸಂಬಂಧ ಮಹಾರಾಷ್ಟ್ರ ಸರ್ಕಾರ ಪದೇಪದೇ ಕ್ಯಾತೆ ತೆಗೆಯುತ್ತಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡ ಇತ್ತೀಚೆಗೆ ಕರ್ನಾಟಕ ಮರಾಠಿ ಭಾಷಿಕರು ವಾಸಿಸುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡುವುದಾಗಿ ಟ್ವೀಟ್ ಮಾಡಿದ್ದರು. ಇದೀಗ ಮಹಾರಾಷ್ಟ್ರ ಸರ್ಕಾರವೇ ಅಧಿಕೃತವಾಗಿ 1956 ರಿಂದ ಇಲ್ಲಿಯವರೆಗಿನ ಗಡಿವಿವಾದ ಸಂಬಂಧ ಮಹಾರಾಷ್ಟ್ರದ ನಿಲುವುಗಳು, ಘಟನಾವಳಿಗಳ ಕುರಿತಾದ ಪುಸ್ತಕವನ್ನು ಪ್ರಕಟಿಸಿದೆ. ಇದಲ್ಲದೇ 50 ವರ್ಷಗಳ ಹಿಂದಿನ ಹಳೆಯ ಸಾಕ್ಷ್ಯಚಿತ್ರವೊಂದನ್ನು ಬಿಡುಗಡೆ ಮಾಡಿದೆ. ಮಹಾರಾಷ್ಟ್ರ ಸರ್ಕಾರ ಸತತವಾಗಿ ಗಡಿಯಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಾ ಬಂದಿದೆ ಎಂದು ಕಿಡಿಕಾರಿದರು.
ಹೀಗಾಗಿ, ಕರ್ನಾಟಕ ಸರ್ಕಾರ ಕೂಡ 1956ರಿಂದ ಕರ್ನಾಟಕದಲ್ಲಿ ಎಂಇಎಸ್, ಶಿವಸೇನೆ ನಡೆಸಿದ ಪುಂಡಾಟಿಕೆ ಹಾಗೂ ಮರಾಠಿ ಭಾಷಿಕರಿಗೆ ಕರ್ನಾಟಕ ಸರ್ಕಾರ ಒದಗಿಸಿರುವ ಸವಲತ್ತುಗಳ ಬಗ್ಗೆ 'ಎಂಇಎಸ್ ಕಿತಾಪತಿ' ಎಂಬ ಹೆಸರುಳ್ಳ ಪುಸ್ತಕವನ್ನು ಹೊರತರುವ ಕೆಲಸ ಮಾಡಬೇಕು. ಇಲ್ಲವಾದರೆ, ಮಹಾರಾಷ್ಟ್ರ ಸರ್ಕಾರ ಇತ್ತೀಚೆಗೆ ಅಧಿಕೃತವಾಗಿ ಬಿಡುಗಡೆ ಮಾಡಿದ ಪುಸ್ತಕವನ್ನೇ ಇಡೀ ದೇಶ ಒಪ್ಪಿಕೊಳ್ಳಬಹುದು.
ಓದಿ: ದ.ಕ. ಜಿಲ್ಲೆಯ ಪ್ರಥಮ ಕಂಬಳಕ್ಕೆ ಸಕಲ ಸಿದ್ಧತೆ : ರಂಗೇರಲಿದೆ ವೀರ-ವಿಕ್ರಮ ಜೋಡು ಕೆರೆ ಬಯಲು
ಮಹಾರಾಷ್ಟ್ರ ಕಿತಾಪತಿ ಬಗ್ಗೆ ದೇಶದ ಜನರಿಗೆ ತಿಳಿಸುವ ಕೆಲಸವನ್ನು ಕರ್ನಾಟಕ ಸರ್ಕಾರ ಮಾಡಬೇಕು. ಅದಕ್ಕಾಗಿ 1982ರ ಗೋಕಾಕ್ ಚಳವಳಿಯಿಂದ ಈವರೆಗೆ ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವ ಅಶೋಕ್ ಚಂದರಗಿ ನೇತೃತ್ವದಲ್ಲಿ ಸಮಿತಿ ರಚಿಸಬೇಕು. ಅಶೋಕ ಚಂದರಗಿಯವರು, ಮೂರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದ್ದು, ಗಡಿ, ನಾಡು-ನುಡಿ ಹಾಗೂ ಹೋರಾಟಗಳ ಬಗ್ಗೆ ಪ್ರಬಂಧ ಮಂಡಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ಮಕಾನದಾರ್ ಒತ್ತಾಯಿಸಿದ್ದಾರೆ.