ಬೆಳಗಾವಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ ಹಾಗೂ ಮಾಜಿ ಶಾಸಕಿ ಶಾರದಮ್ಮ ಮಹಾದೇವಪ್ಪ ಪಟ್ಟಣ(92) ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ವಯೋಸಹಜ ಕಾಯಿಲೆಯಿಂದ ಕೆಲ ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಶಾರದಮ್ಮ ಪಟ್ಟಣ ಇಂದು ಅಸುನೀಗಿದರು.
ಶಾರದಮ್ಮ ಅವರು 1927 ಅಕ್ಟೋಬರ್ 13ರಂದು ಜನಿಸಿದ್ದರು.ರಾಮದುರ್ಗ ಕ್ಷೇತ್ರದ ಮಾಜಿ ಶಾಸಕ ಡಾ. ಮಹಾದೇವಪ್ಪ ಶಿವಬಸಪ್ಪ ಪಟ್ಟಣ ಅವರ ಪತ್ನಿಯಾಗಿರುವ ಶಾರದಮ್ಮ ರಾಮದುರ್ಗ ಕ್ಷೇತ್ರದಿಂದ ಆಯ್ಕೆಯಾದ ಏಕೈಕ ಮಹಿಳಾ ಶಾಸಕಿ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.
1967 ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರಾಮದುರ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಆಗಿ ಕಣಕ್ಕಿಳಿದಿದ್ದ ಶಾರದಮ್ಮ ಗೆಲುವು ದಾಖಲಿಸಿದ್ದರು. ಅಂದಿನಿಂದ ಇಲ್ಲಿಯವರೆಗೆ ಈ ಕ್ಷೇತ್ರದಲ್ಲಿ ಮಹಿಳೆಯರು ಶಾಸಕರಾಗಿಲ್ಲ. ಸಿದ್ದರಾಮಯ್ಯ ಸರ್ಕಾರದ ಮುಖ್ಯ ಸಚೇತಕರಾಗಿದ್ದ ಪುತ್ರ ಅಶೋಕ ಪಟ್ಟಣ ಸೇರಿದಂತೆ ಶಾರದಮ್ಮ ಅವರು ಅಪಾರ ಬಂಧಗಳನ್ನು ಅಗಲಿದ್ದಾರೆ.