ಅಥಣಿ (ಬೆಳಗಾವಿ): ಕೃಷ್ಣಾ ನದಿ ಪ್ರವಾಹದಿಂದಾಗಿ ಅಥಣಿ ತಾಲೂಕಿನ ಸವದಿ ಗ್ರಾಮದ ನಡುಗಡ್ಡೆಯಲ್ಲಿ ಸಿಲುಕಿದ್ದ 54 ಜನರನ್ನು ಎಸ್ಡಿಆರ್ಎಫ್ ತಂಡ ರಕ್ಷಣೆ ಮಾಡಿದೆ.
ಅಥಣಿ ಸಿಪಿಐ ಶಂಕರಗೌಡ ಬಸವನಗೌಡರ ನೇತೃತ್ವದ ಎಸ್ಡಿಆರ್ಎಫ್ ತಂಡ ಹಾಗೂ ಕೊಲ್ಲಾಪುರ ಜಿಲ್ಲೆಯ ಎಸ್ಡಿಆರ್ಎಫ್ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಗ್ರಾಮಸ್ಥರನ್ನು ರಕ್ಷಿಸಿ, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.
ಕಳೆದ ನಾಲ್ಕು ದಿನಗಳಿಂದ ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಕೃಷ್ಣಾ ನದಿಯಲ್ಲಿ ಪ್ರವಾಹ ತಗ್ಗಿಲ್ಲ. ಅಥಣಿ ತಾಲೂಕಿನ 14 ಹಾಗೂ ಕಾಗವಾಡ ತಾಲೂಕಿನ 12 ಗ್ರಾಮಗಳು ಸಂಪೂರ್ಣ ಜಲಾವೃತವಾಗಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ.
ಕೃಷ್ಣಾ ನದಿ ತನ್ನ ಒಡಲನ್ನು ಬಿಟ್ಟು 5 - 6 ಕಿ.ಮೀ ದೂರದಷ್ಟು ತನ್ನ ವ್ಯಾಪ್ತಿ ಹೆಚ್ಚಿಸಿದೆ. ಇದರ ಪರಿಣಾಮ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಕಬ್ಬು ಸಂಪೂರ್ಣ ಮುಳುಗಡೆಯಾಗಿ ಕೊಳೆಯುವ ಸ್ಥಿತಿ ತಲುಪಿದೆ. ಕೆಲ ನೆರೆ ಸಂತ್ರಸ್ತರು ಕೆಲವು ಬಯಲು ಪ್ರದೇಶದಲ್ಲಿದ್ದರೆ, ಕೆಲವರು ಸಂಬಂಧಿಕರ ಮನೆಗೆ ಹೋಗಿದ್ದಾರೆ. ಇನ್ನೂ ಕೆಲವರು ಗಂಜಿ ಕೇಂದ್ರಗಳಿಗೆ ತೆರಳಿದ್ದಾರೆ.
ಇದನ್ನೂ ಓದಿ: ಬೊಮ್ಮಾಯಿ ಮೊದಲ ಬಾರಿ MLC ಆಗಿದ್ದಾಗ ಪ್ರಜ್ವಲ್ ರೇವಣ್ಣ ಹುಟ್ಟಿರಲಿಲ್ಲ: ಪ್ರೀತಂ ಗೌಡ